ಶಿಕ್ಷಣ ಸಾಮಾಜಿಕ ಪರಿವರ್ತನೆಯ ಸಾಧನೆ

ಕಲಬುರಗಿ.ನ.11: ಶಿಕ್ಷಣವು ಮಾನವನಲ್ಲಿ ಅಡಗಿರುವ ಅಜ್ಞಾನ, ಅಂಧಕಾರವನ್ನು ದೂರ ಮಾಡಿ, ಅವನಿಗೆ ಜ್ಞಾನ, ಸಂಸ್ಕಾರ, ಮೌಲ್ಯಗಳನ್ನು ನೀಡುತ್ತದೆ. ಇದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ, ಶ್ರಮಬಲದ ಉತ್ಪಾದಕತೆ, ಬದುಕುವ ವಿಧಾನ, ಸಂಶೋಧನೆ ಮತ್ತು ಆವಿಷ್ಕಾರಗಳು ಜರುಗುವ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ತರುವ ಸಾಧನವಾಗಿ ಶಿಕ್ಷಣವು ಕಾರ್ಯನಿರ್ವಹಿಸುತ್ತದೆಯೆಂದು ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿನಾಥ ದಂಡಪಗೋಳ ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ಜಗತ್ ಬಡಾವಣೆಯಲ್ಲಿರುವ ಸಂಸ್ಥೆಯ ‘ಶ್ರೀ ಮೈಲಾರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಡಾ.ಮೌಲಾನಾ ಅಬುಲ್ ಕಲಾಂ ಆಜಾದರ ಜನ್ಮದಿನವಾದ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಡಾ.ಮೌಲಾನಾ ಆಜಾದ್ ಅವರು, ಸ್ವಾತಂತ್ರ ಹೋರಾಟಗಾರರು, ಲೇಖಕರು, ಶಿಕ್ಷಣ ತಜ್ಞರು, ದೇಶದ ಪ್ರಥಮ ಶಿಕ್ಷಣ ಸಚಿವರು ಹೀಗೆ ಬಹುವಿಧದಲ್ಲಿ ನಮ್ಮ ದೇಶಕ್ಕೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. ಇದರಿಂದ ರಾಷ್ಟ್ರಕ್ಕೆ ಉಜ್ವಲ ಭವಿಷ್ಯವಿದೆ. ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡಿ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲಾ ಯೋಜನೆಗಳ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಶಿಕ್ಷಣದ ಮಹತ್ವದ ಬಗ್ಗೆ ವ್ಯಾಪಕ ಜನಜಾಗೃತಿ ಮೂಡಿಸಬೇಕಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷ ಸುನೀಲಕುಮಾರ ವಂಟಿ, ಸದಸ್ಯ ಶರಣಪ್ಪ ಬುಳ್ಳಾ, ಮುಖ್ಯ ಶಿಕ್ಷಕ ವೀರಭದ್ರಪ್ಪ ಪಸಾರೆ, ಸಹ ಶಿಕ್ಷಕರಾದ ಸಿದ್ದಪ್ಪ ಹೂಗಾರ, ನಾಗಶೆಟ್ಟಿ ಅಕ್ಕೋಣಿ, ನೀಲಮ್ಮ, ಬಳಗದ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮತ್ತಿತರರಿದ್ದರು.