ಬೆಂಗಳೂರು, ಜು.೧೦-ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ದೇಶದ ಅನೇಕ ಹಳ್ಳಿಗಳು ಶಿಕ್ಷಣದ ಕೊರತೆಯಿಂದ ಹಿಂದುಳಿದಿವೆ. ಪಡೆದಿರುವ ಶಿಕ್ಷಣವನ್ನು ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ತಿಳಿಸಿದರು.
ನಗರದಲ್ಲಿಂದು ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ರ್‍ಯಾಂಕ್ ಪಡೆದ ೫೧ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿ ಅವರು ಭಾಷಣ ಮಾಡಿದರು.
ವಿದ್ಯಾರ್ಥಿ ಜೀವನದ ಇನ್ನೊಂದು ಪುಟವು ತೆರೆದುಕೊಂಡಿದೆ. ಈಗ ನೀವು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಕೊಂಡು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ನಿಮ್ಮ ಕಾಲೇಜಿಗೆ ಮತ್ತು ನಿಮ್ಮ ಅಪ್ಪ-ಅಮ್ಮನಿಗೆ ಅಭಿಮಾನ ಹುಟ್ಟುವ ಹಾಗೆ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಇಂದು ನೀವೆಲ್ಲರೂ ಪದಕಗಳು, ಪ್ರಶಸ್ತಿಗಳು, ಪ್ರಮಾಣಪತ್ರಗಳು ಮತ್ತು ಪದವಿಗಳನ್ನು ಸ್ವೀಕರಿಸುತ್ತಿದ್ದೀರಿ. ಈ ಅವಧಿಯಲ್ಲಿ, ನೀವು ಸುಖಕರ ಮತ್ತು ಕೆಲವು ಅಹಿತಕರ ನೆನಪುಗಳೊಂದಿಗೆ ಕಷ್ಟಗಳು, ಸವಾಲುಗಳು, ಕಠಿಣ ಪರಿಶ್ರಮದ ದೀರ್ಘ ಪ್ರಯಾಣವನ್ನು ಕೈಗೊಂಡಿದ್ದೀರಿ.
ಈ ಐತಿಹಾಸಿಕ ಕಾಲೇಜಿನಲ್ಲಿ ನಿಮ್ಮ ಅಧ್ಯಯನದ ಸಮಯದಲ್ಲಿ ನೀವು ಗಳಿಸಿದ ಆಹ್ಲಾದಕರ ನೆನಪುಗಳು, ಅನುಭವ ಮತ್ತು ಜ್ಞಾನವನ್ನು ನೀವು ಮನೆಗೆ ಕೊಂಡೊಯ್ಯಬೇಕು ಮತ್ತು ಸದಾ ಹಸಿರಾಗಿ ಉಳಿಯಬೇಕು ಎಂದು ಕರೆ ನೀಡಿದರು.
ಪದವಿಗಳು, ಪದಕಗಳು, ರ್‍ಯಾಂಕ್‌ಗಳನ್ನು ಪಡೆಯುವುದು ಮಾತ್ರ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ, ವಿವೇಕ, ಮಾನವೀಯತೆ, ಸಾಮಾನ್ಯ ಜ್ಞಾನ ಮತ್ತು ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳುವುದು ಅಷ್ಟೇ ಮುಖ್ಯ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ೫,೯೯೭ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ೩೫,೯೧೧ ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿ ದ್ದಾರೆ. ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯವಾದ ಕಾರಣ ವಿಶ್ವವಿದ್ಯಾಲಯವೇ ೩೮ ಚಿನ್ನದ ಪದಕ ನೀಡುತ್ತಿದೆ.
ದಾನಿಗಳು ೧೩ ಚಿನ್ನದ ಪದಕ ಸ್ಥಾಪಿಸಿದ್ದಾರೆ. ಎಂಎಸ್ಸಿ ರಸಾಯನ ಶಾಸ್ತ್ರದಲ್ಲಿ ಪದ್ಮಾವತಿ ಕೆ.ವಿ. ನಾಯರ್, ಬಿ.ಕಾಂನಲ್ಲಿ ಕೃಪಾನಿಧಿ ವಾಣಿಜ್ಯ ಕಾಲೇಜಿನ ಅಜಿತ್ ಕುಮಾರ್ ಎಂ, ಬಿಬಿಎನಲ್ಲಿ ಶೇಷಾದ್ರಿಪುರಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಸ್.ದೀಪ್ತಿ ತಲಾ ಮೂರು ಚಿನ್ನದ ಪದಕ ಪ್ರದಾನಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಶ್ವವಿದ್ಯಾಲಯದ ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ವಿ.ಲೋಕೇಶ್ ಸೇರಿದಂತೆ ಪ್ರಮುಖರಿದ್ದರು.