ಶಿಕ್ಷಣ ಸಮಾಜದ ಅವಿಭಾಜ್ಯ ಅಂಗ

ಬಂಗಾರಪೇಟೆ.ಜು೧೯:ಶಿಕ್ಷಣ ಸಮಾಜದ ಅವಿಭಾಜ್ಯ ಅಂಗ, ಶಿಕ್ಷಣವನ್ನು ಹೊರತುಪಡಿಸಿ ಸದೃಢ ಸಮಾಜ ನಿರ್ಮಾಣ ಸಾಧ್ಯವಿಲ್ಲ, ಈ ಹಿನ್ನೆಲೆಯಲ್ಲಿ ನನ್ನ ವೇತನದ ಶೇ೨೦ರಷ್ಟು ಹಣವನ್ನು ಹಸಿದವರಿಗೆ ಅನ್ನ, ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ(ಅರಿವು)ಅನಾರೋಗ್ಯದಿಂದ ಬಳಲುವವರಿಗೆ ಹಾರೈಕೆಗೆ ಮೀಸಲಿಟ್ಟಿದ್ದೇನೆ, ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ, ಎಂದು ಕವಿ ಲಕ್ಷ್ಮಯ್ಯ.ವಿ ತಿಳಿಸಿದರು.
ಪಟ್ಟಣದ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜು ಮತ್ತು ಕರ್ನಾಟಕ ಕವಿ ಕಾವ್ಯ ವೇದಿಕೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ತೂಗುಯ್ಯಾಲೆಯಲ್ಲಿನ ಸುಂದರ ದೇವತೆ” ಎಂಬ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಜಾಗತೀಕರಣ ಉದಾರಿಕರಣ ತಂತ್ರಜ್ಞಾನ ವಿಜ್ಞಾನ ಬೆಳೆದಂತೆಲ್ಲ ಮಾನವನಲ್ಲಿ ನೈತಿಕ ಸಾಮಾಜಿಕ ಮಾನವೀಯ ಮೌಲ್ಯಗಳು ಕಣ್ಮರೆಯಾಗಿ ಸಂಕೋಚಿತ ಮನೋಭಾವದಿಂದ ದಬ್ಬಾಳಿಕೆ ದೌರ್ಜನ್ಯ ಅನ್ಯಾಯ ಜಾತಿ ಜಾತಿಗಳ ನಡುಚಿ ಕಂದಕ ಏರ್ಪಡುವುದರ ಮೂಲಕ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ,
ವಿಶ್ವ ಮಾನವ ಸಂದೇಶ ಪಸರಿಸುವ ಜವಾಬ್ದಾರಿ:
ಹುಟ್ಟು ಸಾವುಗಳ ನಡುವೆ ಇರುವ ಜೀವನದಲ್ಲಿ ರಾಗ, ದ್ವೇಷ, ಅಸೂಯೆ ಎಂಬ ಅನಿಷ್ಠಗಳನ್ನು ಮರೆತು ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸ, ಭ್ರಾತೃತ್ವದ ಆಧಾರದ ಮೇಲೆ ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕುವೆಂಪುರವರ ವಿಶ್ವ ಮಾನವ ಸಂದೇಶವನ್ನು ಯುವ ಸಮುದಾಯ ಪಸರಿಸುವುದರ ಮೂಲಕ ನವ ಭಾರತ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು.
ಉಚಿತ ಕೊಡುಗೆ ಕೇವಲ ಕ್ಷಣಿಕ, ಸ್ವಾವಲಂಬಿ ಬದುಕು ಸ್ಥಿರ ಮತ್ತು ಅಜರಾಮರ:
ಉಚಿತವಾಗಿ ಯಾವುದೇ ಹಣ ನೀಡಬಾರದು ಎಂಬ ನಿಲುವು ನನ್ನದು ಆದಕಾರಣ ಇಂದು ಭಾವಗೀತೆ ಗಾಯನ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ನಗದು ರೂಪದಲ್ಲಿ ಬಹುಮಾನ ನೀಡಲು ಬಯಸಿದ್ದೇನೆ, ಇದರಿಂದ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ, ಉಂಟಾಗುತ್ತದೆ ಹಾಗೂ ತನ್ನ ಬಗ್ಗೆ ತನಗೆ ಹೆಮ್ಮೆ ಪಡುವಂತಾಗುತ್ತದೆ. ಮತ್ತು ಮುಂದಿನ ಸ್ಪರ್ಧೆಗೆ ಸಿದ್ದನಾಗುತ್ತಾನೆ, ಉಚಿತ ಕೊಡುಗೆಗಳು ಕೇವಲ ಕ್ಷಣಿಕ ಸುಖವನ್ನು ನೀಡಿದರೆ, ಸಾಮರ್ಥ್ಯದ ಆಧಾರದ ಮೇಲೆ ಪಡೆದ ಕೊಡುಗೆ ಸ್ಥಿರಸ್ಥಾಯಿ ಆಗಿರುತ್ತದೆ, ಯಾರು ಸಹ ಉಚಿತವಾಗಿ ಕೊಡಬೇಡಿ ಅಥವಾ ಪಡಿಯಬೇಡಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಕವಿ ಕಾವ್ಯ ವೇದಿಕೆ ಅಧ್ಯಕ್ಷ ಜಿ.ಟಿ.ರಾಮಚಂದ್ರ, ಜನಪದ ಗಾಯಕ ವಿ.ರಾಜು, ಪ್ರಾಂಶುಪಾಲರಾದ ಮುನಿಶಾಮಪ್ಪ, ಕನ್ನಡ ಪ್ರಾಧ್ಯಾಪಕರಾದ ಎಸ್.ಜ್ಯೋತಿ, ಉಪ ಪ್ರಾಂಶುಪಾಲ ರವಿಕುಮಾರ್, ಉಪನ್ಯಾಸಕರಾದ ವೇಣುಗೋಪಾಲ್, ಪ್ರಸನ್ನಕುಮಾರ್, ಗ್ರಂಥಪಾಲಕ ಉಷಾ, ಸುನೀಲ್‌ಕುಮಾರ್, ಕೆ.ಎಂ.ವಿ.ಪ್ರಸಾದ್, ಮಂಜುನಾಥ್, ಇತರರು ಉಪಸ್ಥಿತರಿದ್ದರು.