ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆಗೆ ಬಿ.ಆರ್.ಪಾಟೀಲ ಆಗ್ರಹ

ಕಲಬುರಗಿ,ಜ.5-ಶಾಲಾ-ಕಾಲೇಜು ಪ್ರಾರಂಭ ಮಾಡುವ ವಿಷಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದಿನಕ್ಕೊಂದು ಹೇಳಿಕೆ ನೀಡಿರುವುದರ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಮಾಜಿ ಶಾಸಕ ಬಿ.ಆರ್.ಪಾಟೀಲ ಅವರು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಕುಮಾರ ಅವರು ಶಿಕ್ಷಣ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮರ್ಥರಿಗೆ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಪ್ರಾರಂಭವಾದ ಅದರ ಗಂಭೀರತೆಯನ್ನು ಅರಿತುಕೊಂಡು ತಜ್ಞರ ಸಲಹೆಯಂತೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಹರಿಯಾಣ, ಜಮ್ಮು ಕಾಶ್ಮೀರ್, ತಮಿಳುನಾಡು ಸೇರಿದಂತೆ ಮತ್ತಿತರ ರಾಜ್ಯಗಳು ಒಂದು ವರ್ಷದವರೆಗೆ ಶಾಲೆ ಆರಂಭಿಸದೇ ಇರಲು ನಿರ್ಧಾರ ಕೈಗೊಂಡಿವೆ. ಆದರೆ ರಾಜ್ಯದಲ್ಲಿ ಮೊದಲಿನಿಂದಲೂ ಶಾಲೆಗಳನ್ನು ಪ್ರಾರಂಭಮಾಡುವ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ ಅವರು ಗೊಂದಲದ ಹೇಳಿಕೆ ನೀಡುತ್ತ ಬಂದಿದ್ದಾರೆ. ಬೆಳಿಗ್ಗೆ ಶಿಕ್ಷಣ ಸಚಿವರು ಒಂದು ಹೇಳಿಕೆ ನೀಡದರೆ, ಮಧ್ಯಾಹ್ನ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮತ್ತೊಂದು ಹೇಳಿಕೆ ನೀಡುತ್ತಾರೆ. ರಾತ್ರಿ ಮುಖ್ಯಮಮಂತ್ರಿಗಳು ಮಗದೊಂದು ಹೇಳಿಕೆ ನೀಡುತ್ತಾರೆ. ಒಟ್ಟಾರೆ ಸರ್ಕಾರವೇ ಈ ವಿಷಯದಲ್ಲಿ ಗೊಂದಲ ಸೃಷ್ಟಿಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತ ಬಂದಿದೆ. ಶಾಲೆ ಪುನರಾರಂಭಿಸುವ ವಿಷಯದಲ್ಲಿ ಸರ್ಕಾರವೇ ಗೊಂದಲದಲ್ಲಿದ್ದರೆ ಮಕ್ಕಳ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸಿದರು.
ಮೊದಲು ವಠಾರ ಶಾಲೆ, ವಿದ್ಯಾಮಗ ಪ್ರಾರಂಭಿಸಿದರು. ಮಕ್ಕಳು ಮತ್ತು ಶಿಕ್ಷಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಅದನ್ನು ಸ್ಥಗಿತಗೊಳಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ವಠಾರ, ವಿದ್ಯಾಗಮದಂತಹ ಕಾರ್ಯಕ್ರಮ ನಡೆಸಿದ್ದರಿಂದ ರಾಜ್ಯದಲ್ಲಿ 50 ಜನ ಶಿಕ್ಷಕರು ಸಾವನ್ನಪ್ಪುವಂತಾಯಿತು. ಇದೀಗ ಮತ್ತೆ ಶಾಲೆಗಳ ಪ್ರಾರಂಭಿಸಲಾಗಿದೆ. ಶಾಲೆ ಆರಂಭಕ್ಕೆ ಮುನ್ನ ಅವುಗಳನ್ನು ಸ್ಯಾನಿಟೈಜ್ ಮಾಡುವಂತೆ ಮತ್ತು ನಗರ, ಪಟ್ಟಣ ಪ್ರದೇಶ ಹೊರತುಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಶಾಲಾ ಕಾಲೇಜು ಪ್ರಾರಂಭಿಸುವಂತೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಆದರೆ ಸರ್ಕಾರ ಶಾಲೆಗಳನ್ನು ಸ್ಯಾನಿಟೈಸ್ ಮಾಡುತ್ತಿಲ್ಲ. ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸ್ ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಹೈಸ್ಕೂಲ್ ಮತ್ತು ಪಿಯುಸಿಯಲ್ಲಿ 1.7 ಕೋಟಿ ಮಕ್ಕಳು ಓದುತ್ತಿದ್ದು, 3 ಲಕ್ಷಕ್ಕೂ ಅಧಿಕ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಶಿಕ್ಷಕರ ಕೋವಿಡ್ ಪರೀಕ್ಷೆ ಮಾಡುವುದ್ಯಾವಾಗ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಸಿಬಿಎಸ್ಇ ಸಿಲೆಬಸ್ ನಲ್ಲಿ ಸ್ಪಷ್ಟತೆ ಇದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಮಾತ್ರ ಗೊಂದಲ ಗೂಡಾದಂತಾಗಿದೆ ಎಂದ ಅವರು, ನಗರ, ಪಟ್ಟಣ ಪ್ರದೇಶಗಳಲ್ಲಿ ಕೋವಿಡ್ ಹರಡುತ್ತಿರುವುದು ಇನ್ನೂ ನಿಂತಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಕೋವಿಡ್ ಕಡಿಮೆಯಾಗಿದೆ. ಹೀಗಾಗಿ ತಜ್ಞರ ಸಮಿತಿ ಶಿಫಾರಸ್ಸಿನಂತೆ ಸರ್ಕಾರ ಮೊದಲು ಗ್ರಾಮೀಣ ಭಾಗದಲ್ಲಿ ಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.