ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ ಇಲಾಖೆ ಬಗ್ಗೆ ಅರಿತುಕೊಳ್ಳಲಿ: ಅರುಣ್ ಶಹಾಪುರ

ಬೀದರ್,ಜೂ.23-ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ಇಲಾಖೆಯನ್ನೇ ಅರಿತುಕೊಳ್ಳದೇ ತರಾತುರಿಯಲ್ಲಿ ಆವೇಷ ಭರಿತರಾಗಿ ಶಿಕ್ಷಣ ತಜ್ಞರ ಸಲಹೆ ಪಡೆಯದೆ, ನಾಲ್ಕೈದು ಸಾಹಿತಿಗಳನ್ನಿಟ್ಟುಕೊಂಡು ಪಠ್ಯಕ್ರಮವನ್ನು ಬದಲಾವಣೆ ಮಾಡಲು ಹೊರಟಿರುವ ಕ್ರಮ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ್ ಟೀಕಿಸಿದರು.
ನಗರದ ಹೊರವಲಯದಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅತಿಥಿ ಶಿಕ್ಷಕರ ನೇಮಕದಲ್ಲೂ ಸಹ ಯಾವುದೇ ಶಿಕ್ಷಣ ನಿಮಯ ಪಾಲಿಸದೆ ಕಾಂಗ್ರೆಸ್ ಶಾಸಕರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಲು ಆಯಾ ಮುಖ್ಯಗುರುಗಳ ಮೇಲೆ ಒತ್ತಡ ಹೇರುತ್ತಿರುವುದು ದುರಂಹಕಾರಕ್ಕೆ ಕಾರಣವಾಗಿದೆ. ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಪ್ರಾಧ್ಯಾಪಕರ ನೇಮಕದಲ್ಲಿ ಇರುವ ನಿಯಮದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ನೇಮಕವಾಗಬೇಕು. ಇದಕ್ಕೆ ಸಾಹಿತಿಗಳ ಸಲಹೆ ಬದಲಾಗಿ ಶಿಕ್ಷಣ ತಜ್ಞರ ಸಲಹೆ ಪಡೆಯಬೇಕು. ನಿಮ್ಮ ಪಕ್ಷದವರೇ ಆದ ರಾಮಲಿಂಗರೆಡ್ಡಿ, ಕಿಮ್ಮನೆ ರತ್ನಾಕರ ಹಾಗೂ ತನ್ವೀರ್ ಸೇಠರಂತಹ ನುರಿತ ನೇತಾರರ ಸಲಹೆ ಪಡೆದು ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕೇ ವಿನ: ಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ಬ್ಯಾಕ್ ಡ್ರೈವಿಂಗ್ ಸೀಟ್ ಆಗಬಾರದು ಎಂದು ಸಲಹೆ ನೀಡಿದರು.
1ನೇ ತರಗತಿಗೆ ಬ್ಯಾಗ್ 2 ಕೆಜಿ, 10ನೇ ತರಗತಿಗೆ 5 ಕೇಜಿ ಎಂಬ ನಿಯಮ ಹೊರಡಿಸರುವ ಬಗ್ಗೆ ಮಾತನಾಡಿದ ಶಹಪುರ ಅವರು, ರಾಜ್ಯದಲ್ಲಿ ನುರಿತ ಮನೋವಿಜ್ಞಾನಿಗಳಿದ್ದು ಅವರ ಸಲಹೆ ಪಡೆದು ವಿದ್ಯರ್ಥಿಗಳ ಶೈಕ್ವಣಿಕ ಗುಣಮಟ್ಟದ ಆಧಾರದ ಮೇಲೆ ಬ್ಯಾಗ್ ತೂಕ್ ನಿರ್ಧರಿಸಬೇಕು, ಸಾವರಕರ್, ಹೆಗಡೆವಾರ ಅವರ ಪಠ್ಯಕ್ರಮವನ್ನು ಸರ್ಕಾರ ಕೈಬಿಟ್ಟಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವೈಜ್ಞಾನಿಕ ಶೈಕ್ಷಣಿಕ ಕ್ರಮವು ಮಕ್ಕಳ ಏಳಿಗೆಗೆ ಮಾರಕವಾದರೆ ಜನ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಗುರನಾಥ ಜ್ಯಾಂತಿಕರ, ಬಸವರಾಜ ಪಾಟೀಲ ಅಷ್ಟೂರ್, ರಾಜಶೇಖರ ನಾಗಮೂರ್ತಿ, ಅರಹಂತ ಸಾವಳೆ, ಅಶೋಕ ಹೊಕ್ರಾಣೆ, ಬಸವರಾಜ ಜೋಜನಾ, ಬಸವರಾಜ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.