ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿಕೆ ಖಂಡನೀಯ-ರಝಾಕ

ರಾಯಚೂರು,ಜು೨೫- ಕರ್ನಾಟಕ ರಾಜ್ಯ ಸರಕಾರದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಅವರು ೧೩,೮೦೦ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುವದು ಎಂದು ಹೇಳಿರುವುದು ಅತ್ಯಂತ ಖಂಡನೀಯವಾಗಿದೆಂದು ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ.ರಝಾಕ ಉಸ್ತಾದ ಅವರು ಹೇಳಿದ್ದಾರೆ.
ಈ ಹೇಳಿಕೆ ನಾಚಿಕೇಗೇಡಿನ ಸಂಗತಿ ಆಗಿದೆ. ಇದು ಸಚಿವರ ಹೊಣೆಗೇಡಿತನ. ಈ ಹೇಳಿಕೆ ಸರಕಾರ ತನ್ನ ಕರ್ತವ್ಯದಿಂದ ವಿಮುಖರಾಗುತ್ತಿರುವುದಕ್ಕೆ ಸಾಕ್ಷಿ. ಸಂವಿಧಾನದ ಅನುಚ್ಛೇಧ ೨೧ಎ ಅನ್ವಯ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ರಾಜ್ಯದ ಎಲ್ಲಾ ೬ ರಿಂದ ೧೪ ವರ್ಷದ ಮಕ್ಕಳಿಗೆ ಅವರ ಮೂಲಭೂತ ಹಕ್ಕಿನ ರೂಪದಲ್ಲಿ ನೀಡಬೇಕು ಎಂದು ಹೇಳಿದೆ. ಸರಕಾರ ಈ ಶಾಲೆಗಳನ್ನು ಮುಚ್ಚುವುದರ ಮೂಲಕ ಸಂವಿಧಾನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಸುಮಾರು ೫೦ ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಈ ೧೩,೮೦೦ ಶಾಲೆಗಳನ್ನು ವಿಲೀನಗೊಳಿಸದ್ದಲ್ಲಿ ಆ ಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಳನ್ನು ಖಾಲಿ ಹುದ್ದೆಗಳ ಜೊತೆಗೆ ಸರಿದೂಗಿಸುವ ದುರಾಲೋಚನೆ ಎಂದೇ ಭಾವಿಸಬಹುದಾಗಿದೆ, ಇದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರ.
ರಾಜ್ಯದಲ್ಲಿ ಸರಕಾರಿ ಶಾಲೆಗಳಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದರೆ ಅದಕ್ಕೆ ಹೊಣೆ ಯಾರು? ಮಕ್ಕಳನ್ನು ಸರಕಾರಿ ಶಾಲೆಗೆ ಕರೆತಂದು ಸಂಪೂರ್ಣ ಸಾಕ್ಷರತೆ ಸಾಧಿಸುವುದು ಸರಕಾರದ ಕರ್ತವ್ಯವಲ್ಲವೇ? ಇಂದಿಗೂ ಸಾಕ್ಷರತೆ ಪ್ರಮಾಣ ಕೆಲವು ಜಿಲ್ಲೆಗಳಲ್ಲಿ ಶೇ.೬೦ ದಾಟಿಲ್ಲ, ನೀವು ಈಗ ಇರುವ ಶಾಲೆಗಳನ್ನು ವಿಲೀನಗೊಳಿಸಿದಲ್ಲಿ ಸಾಕ್ಷರತೆ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುತ್ತದೆ. ಸರಕಾರ ಶಾಲೆಗಳನ್ನು ನಡೆಸುವದು ಭಾರವೆಂದು ಭಾವಿಸದರೆ ಅದು ಸರಕಾರವಲ್ಲ, ಅದೊಂದು ಖಾಸಗಿ ಕಂಪನಿ ಎಂದು ಕರೆಯಬೇಕಾಗುತ್ತದೆ. ಸರಕಾರಕ್ಕೆ ನಿಜವಾಗಿಯೂ ಭಾರವಾಗುವ ಸಾಕಷ್ಟು ಕೆಲಸಗಳನ್ನು ಯಾವುದೇ ಅಡೆತಡೆಯಿಲ್ಲದೇ ಮಾಡುತ್ತದೆ, ಆದರೆ ಶಾಲೆಗಳನ್ನು ನಡೆಸುವದು ಭಾರವೆಂದು ಭಾವಿಸುವದು ಮೂರ್ಖತನದ ಪರಮಾವಧಿ.
ಇಂದಿನ ದಿನಗಳಲ್ಲಿ ಪಾಲಕರು ಎರಡು ಕಾರಣಕ್ಕೆ ಸರಕಾರಿ ಶಾಲೆಗಳಿಂದ ತಮ್ಮ ಮಕ್ಕಳನ್ನು ದೂರವಿಡುತ್ತಿದ್ದಾರೆ, ಒಂದು ಇಂಗ್ಲಿಷ್ ಮಾದ್ಯಮದ ಮೇಲೆ ಇರುವ ವ್ಯಾಮೋಹದಿಂದ, ಎರಡನೇಯದ್ದು ಸರಕಾರಿ ಶಾಲೆಗಳ ಕಳಪೆ ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಲಭ್ಯ ಕೊರತೆಯ ಕಾರಣಕ್ಕೆ ಬಹುತೇಕ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ, ಇದನ್ನು ಖಾತರಿಪಡಿಸುವವರು ಯಾರು? ಸರಕಾರ ಪ್ರತಿಯೊಂದು ಶಾಲೆಗಳಲ್ಲಿ ಶಾಲಾ ಅಭಿವೃದ್ದಿ ಹಾಗೂ ಆಡಳಿತ ಸಮಿತಿ ರಚಿಸಲು ಅವಕಾಶ ನೀಡಿದೆ, ಇದರ ಮೂಲ ಉದ್ದೇಶ ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪಾಲಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದು, ಆದರೆ ಇಂದು ಅದೊಂದು ರಾಜಕೀಯ ನಿರಾಶ್ರಿತರ ಸಮಿತಿಯಾಗಿ ಮಾರ್ಪಟ್ಟಿದೆ.
ಇದಕ್ಕೆ ಹೊಣೆ ಯಾರು, ಇದರಿಂದ ಬಹುತೇಕ ಶಾಲಾ ಶಿಕ್ಷಕರಿಗೆ ಕಿರಿ ಕಿರಿಯಾಗುತ್ತಿರುವದು ವರದಿಯಾಗಿದೆಯಲ್ಲದೇ, ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣದ ಬದಲಾಗಿ ರಾಜಕೀಯ ವಾತಾವರಣ ಸೃಷ್ಠಿಸಲಾಗಿದೆ, ಇದು ಸರಕಾರದ ವೈಫಲ್ಯವಲ್ಲವೇ? ಈ ರೀತಿ ರಾಜಕೀಯ ಪ್ರೇರಿತ ಶಾಲಾ ಅಭಿವೃದ್ದಿ ಹಾಗೂ ಆಡಳಿತ ಸಮಿತಿ ರಚಿಸಲು ಅವಕಾಶ ನೀಡಿರುವ ಅಧಿಕಾರಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳುವದಕ್ಕೆ ಹಿಂಜರಿಕೆ ಏತಕ್ಕೆ.
ಇಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಬ್ಬ ಶಿಕ್ಷಕ ಸರಕಾರದ ಈ ನೀತಿಯ ವಿರುದ್ದ ಮಾತನಾಡಿದ್ದಕ್ಕೆ ಅಲ್ಲಿಯ ಅಧಿಕಾರಿಗಳು ಶೋಕಾಸ ನೋಟಿಸ್ ನೀಡಿರುವದು ಅತ್ಯಂತ ಖಂಡನೀಯವಾದದ್ದು, ಇದು ದಬ್ಬಾಳಿಕೆಯ ತಂತ್ರ, ಹಿಂದೆ ರಾಷ್ಟ್ರಕವಿ ಕುವೆಂಪು, ಗಿರೀಶ ಕಾರ್ನಾಡ, ಯು.ಆರ್.ಅನಂತಮೂರ್ತಿಯಂಹ ದಿಗ್ಗಜರು ಸರಕಾರಿ ಸೇವೆಯಲ್ಲಿಯೇ ಇದ್ದು ಸರಕಾರದ ನೀತಿಗಳ ವಿರುದ್ದ ಮಾತನಾಡಿಲ್ಲವೇ, ಅದು ಅಪರಾಧವೆಂದು ಅಂದಿನ ಸರಕಾರಗಳು ಭಾವಿಸಲ್ಲವಲ್ಲ, ಈಗೇಕೆ. ಈಗಿನ ಸರಕಾರ ಭಿನ್ನ ಧ್ವನಿಯನ್ನು ಅಡಗಿಸಲು ಪ್ರಯತನಿಸುತ್ತಿದೆಯೇ? ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಕಾರಣ, ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಬೇಕು, ಕಳೆದ ೮ ವರ್ಷಗಳಿಂದ ಸರಕಾರ ಪ್ರೌಡ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿರುವದಿಲ್ಲ, ಕಳೆದ ಒಂದು ದಶಕದಿಂದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿರುವದಿಲ್ಲ, ನಗರ ಪ್ರದೇಶದ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳ ಸರಕಾರದ ಅನುದಾನದಲ್ಲಿ ಕಡ್ಡಾಯವಾಗಿ ಇಂತಿಷ್ಟೂ ಅನುದಾನ ಮೀಸಲಿಡಲು ಸೂಚಿಸಬೇಕು, ಖಾಯಂ ಶಿಕ್ಷಕರ ನೇಮಕಾತಿಯಾಗುವವರೆಗೆ ಅತಿಥಿ ಶಿಕ್ಷಕರ ನೇಮಕಾತಿಯನ್ನು ಪ್ರತಿ ವರ್ಷ ಶಾಲೆ ಪ್ರಾರಂಭವಾಗುವ ದಿನದಂದೇ ನೇಮಕಾತಿ ಮಾಡಿಕೊಳ್ಳಬೇಕು.
ಸರಕಾರ ೧೩೮೦೦ ಶಾಲೆಗಳನ್ನು ವಿಲೀನಗೊಳಿಸುವುದರ ಮೂಲಕ ಅಷ್ಟೂ ಶಾಲೆಗಳನ್ನು ಮುಚ್ಚುವ ಬದಲಾಗಿ ಅವುಗಳನ್ನು ಸಶಕ್ತೀಕರಣಗೊಳಿಸುವದರ ಬಗ್ಗೆ ಯೋಚಿಸಬೇಕು, ಇಲ್ಲದಿದ್ದಲ್ಲಿ ಜನ ಸರಕಾರದ ವಿರುದ್ಧ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಲಾಗುತ್ತದೆ.