ಶಿಕ್ಷಣ ವ್ಯವಸ್ಥೆಯ ಸಫಲತೆಗೆ ಸಹಕಾರ ಅಗತ್ಯ

ಕಲಬುರಗಿ:ಜೂ.10: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಪ್ರಮುಖ. ಪರಿಣಾಮಕಾರಿ ಬೋಧನೆ, ಕಲಿಕೆಯಾಗಿ ಶಿಕ್ಷಣದ ಫಲ ದೊರೆಯಲು ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕ-ಪೋಷಕ ವರ್ಗ, ಸಮುದಾಯ ಎಲ್ಲರೂ ಜೊತೆಗೂಡಿ ಸಹಕಾರ, ಕರ್ತವ್ಯಬದ್ಧತೆಯಿಂದ ಸಾಗಿದಾಗ ಮಾತ್ರ ಅದು ಸಾಧ್ಯವಾಗುತ್ತದೆಯೆಂದು ಮುಖ್ಯ ಶಿಕ್ಷಕ ನಿಂಗಪ್ಪ ಸಿ.ಮಂಗೊಂಡಿ ಅಭಿಮತ ವ್ಯಕ್ತಪಡಿಸಿದರು.

    ನಗರದ ಸಮೀಪದ ಗುಂಜ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕಾ ಘಟಕ ಇವುಗಳ ವತಿಯಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ಆನಲೈನ್ ತರಗತಿಯ ಮೂಲಕ ರಾಜ್ಯದಲ್ಲಿಯೇ ವಿನೂತನ ಪ್ರಯೋಗ ಮಾಡಿದ್ದರ ಪ್ರಯುಕ್ತ ತಮಗೆ ಶಾಲಾ ಆವರಣದಲ್ಲಿ ಬುಧವಾರ ಸರಳವಾಗಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

   ಲಾಕ್‍ಡೌನ್‍ದಿಂದಾಗಿ ಭೌತಿಕ ತರಗತಿಗಳು ಜರುಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಯು ಕುಂಠಿತವಾಗುತ್ತಿದೆ. ಇದನ್ನು ಮನಗಂಡು ನಮ್ಮ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಎಸ್.ಡಿ.ಎಂ.ಸಿ., ಗ್ರಾ.ಪಂ ಸದಸ್ಯರು ಸೇರಿದಂತೆ ಎಲ್ಲರ ಸಹಕಾರದಿಂದ ಕಳೆದ ಒಂದನೇ ದಿನಾಂದಿಂದ ಆನ್‍ಲೈನ್ ತರಗತಿಗಳು ಆರಂಭಿಸಲಾಗಿದೆ. ಶಾಲೆಯ ಒಟ್ಟು 178 ವಿದ್ಯಾರ್ಥಿಗಳಲ್ಲಿ ಈಗಾಗಲೇ 150 ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಸ್ವಯಂ ಸೇವಕರು ಇವರೆಲ್ಲರು ದಿನನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು, ಎಸ್.ಡಿ.ಎಂ.ಸಿ ಮತ್ತು ಗ್ರಾಪಂ ಮೇಲುಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ಹೇಳಿದರು.

   ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ, ಆಳಂದ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿದರು. ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಹ ಶಿಕ್ಷಕ ರಾಜಕುಮಾರ ಬಟಗೇರಿ, ಎಸ್.ಡಿ.ಎಂ.ಸಿ ಸದಸ್ಯ ಅಲ್ಲಾಬಕ್ಷ(ಬಾಬು) ಮುಲ್ಲಾ ಇದ್ದರು.