ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲು ಕರೆ

ಸಂಡೂರು:ಜ:13: ಅಧುನಿಕತೆಯಲ್ಲಿರುವ ನಾವುಗಳು ಪ್ರತಿಯೊಬ್ಬರೂ ಸಹ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಬಿಸಿಎಂ. ತಾಲೂಕು ಅಧಿಕಾರಿ ಸಂಗಮೇಶ್ ತಿಳಿಸಿದರು.
ಅವರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ತಾಲೂಕು ಬಿಸಿಎಂ. ತಾಲೂಕಾಡಳಿತದಿಂದ ಗೊಲ್ಲ/ಅಲೆಮಾರಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂದು ಸರ್ಕಾರ ಅವರ ಜಾಗೃತಿಗೆ ಮತ್ತು ಅಭಿವೃದ್ದಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಪೂರ್ಣ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಅರ್ಥಿಕ, ಸಾಮಾಜಿಕ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಗೊಲ್ಲ ಸಂಘದ ಅಧ್ಯಕ್ಷ ಜಿ.ಎಸ್. ಸಿದ್ದಪ್ಪ ಅವರು ಮಾತನಾಡಿ ನಮ್ಮ ಸಮುದಾಯದಲ್ಲಿ ಇನ್ನೂ ಸಹ ಹಲವಾರು ಕುಟುಂಬಗಳು ಬಡತನದಲ್ಲಿ ನಲುಗುತ್ತಿವೆ, ಅವರಿಗೆ ಸರ್ಕಾರದ ಯೋಜನೆಗಳು ತಲುಪಿಲ್ಲ, ಇಂತಹ ಕಾರ್ಯಕ್ರಮಗಳ ಮೂಲಕ ತಲುಪಿಸುವಂತಹ ಕಾರ್ಯ ನಿರಂತರವಾಗಿ ನಡೆದಾಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ ಅವರು ಮಾತನಾಡಿ ಗೊಲ್ಲ ಸಮುದಾಯದಲ್ಲಿ ಇನ್ನೂ ಸಹ ದುಷ್ಟ ಸಂಪ್ರದಾಯಗಳು ಜೀವಂತವಾಗಿದ್ದು, ಅದರ ಹೆಸರಿನಲ್ಲಿ ಮಹಿಳೆಯರ ಶೋಷಣೆ ಮತ್ತು ರಕ್ಷಣೆ ಇಲ್ಲವಾಗುತ್ತಿದೆ, ಇದಕ್ಕೆ ಪ್ರಮುಖವಾದ ಕಾರಣ ಶಿಕ್ಷಣದ ಕೊರತೆ, ಅದ್ದರಿಂದ ಪ್ರತಿಯೊಂದು ಮಗುವೂ ಸಹ ಶಿಕ್ಷಣವನ್ನು ಪಡೆಯುವ ಮೂಲಕ ಉತ್ತಮ ಪ್ರಜೆಯಾದಾಗ ಇಂತಹ ದುಷ್ಟ ಪದ್ದತಿಗಳನ್ನು ಕಿತ್ತೋಗೆದು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ, ಅದ್ದರಿಂದ ಇಡೀ ಗೊಲ್ಲ ಸಮುದಾಯದ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ರಾತಿನಿಧ್ಯವನ್ನು ನೀಡಬೇಕು, ಅಲ್ಲದೆ ದುಷ್ಟ ಸಂಪ್ರದಾಯಗಳನ್ನು ಹೋಗಲಾಡಿಸಬೇಕು, ವಿಶೇಷವಾದ ಶಿಕ್ಷಣದ ಮೂಲಕ ಜಾಗೃತಿಯನ್ನು ಉಂಟು ಮಾಡುವ ಮೂಲಕ ಜನರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಗೊಲ್ಲರ ಸಂಘದ ಪದಾಧಿಕಾರಿಗಳು ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚಿತ್ತಪ್ಪ, ನಾಗೇಂದ್ರಪ್ಪ, ಮುಖಂಡರಾದ ದಾಸಪ್ಪ, ಯರ್ರಿಸ್ವಾಮಿ, ದೊಡ್ಡಪ್ಪ, ಅಧಿಕಾರಿಗಳಾದ ಸಂಗಮೇಶ್, ಗ್ರಾಮದ ಮಹಿಳೆಯರು, ಮುಖಂಡರು ಉಪಸ್ಥಿತರಿದ್ದರು.