ಶಿಕ್ಷಣ ಜಗತ್ತನ್ನು ನೋಡುವ ಕಿಟಕಿ

ಹರಪನಹಳ್ಳಿ, ಜ.11- ಶಿಕ್ಷಣ, ಸಾಕ್ಷರತೆ ಜಗತ್ತನ್ನು ನೋಡುವ ಕಿಟಕಿಗಳಾಗಿವೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಸವರಾಜ್ ಸಂಗಪ್ಪನವರ್ ಅಭಿಪ್ರಾಯಪಟ್ಟರು.
ಪಟ್ಟಣದ ಹರಿಹರ ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್ ಸಭಾಂಗಣದಲ್ಲಿ ವಿಶ್ವಚೇತನ ಸಂಸ್ಥೆ, ಲಡಾಯಿ ಪ್ರಕಾಶನದ ಸಹಯೋಗದಲ್ಲಿ ಸಾವಿತ್ರಿ ಬಾಯಿಪುಲೆ ಜನ್ಮದಿನಾಚರಣೆಯಲ್ಲಿ ಪುಸ್ತಕ ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಮಹಾನ್ ಚೇತನಗಳಾದ ಮಹತ್ಮಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಮುಂಚಿತವಾಗಿ ಜನಿಸಿದ್ದ ಸಾವಿತ್ರ ಬಾಯಿ ಪುಲೆ ಅವರೂ, ಮೇಲ್ವರ್ಗದವರ ತೀವ್ರ ವಿರೋಧದ ನಡುವೆಯು ಶಾಲೆಯನ್ನು ತೆರೆದು ಮಹಿಳೆಯರಿಗೆ ಶಿಕ್ಷಣ ಕೊಡಿಸಿ, ಅಕ್ಷರಸ್ಥರನ್ನಾಗಿ ಮಾಡಿದ್ದಾರೆ. ಈ ಮೂಲಕ ಬ್ರಿಟೀಷರಿಂದ ಭಾರತ ಮೊಲದ ಮಹಿಳಾ ಶಿಕ್ಷಕಿ ಎನ್ನುವ ಬಿರುದಿಗೆ ಪಾತ್ರರಾಗಿದ್ದರು ಎಂದರು.
ಹಸಿವಿಗೆ ಅನ್ನ ಎಷ್ಟು ಮುಖ್ಯವಗೋ, ಸಾಕ್ಷರತೆಯ ಅರಿವು ಮುಖ್ಯ. ಪುಲೆ ದಂಪತಿಗಳು ಅಂದು ಹಚ್ಚಿದ ಸಾಕ್ಷರತಾ ಜ್ವಾಲೆ ನಿರಂತರವಾಗಿ ಬೆಳಗುತ್ತಿದೆ. ಭೂತಕಾಲ, ವರ್ತಮಾನ, ಭವಿಷತ್ ಕಾಲದ ಪ್ರಜ್ಞೆಯಲ್ಲಿ ಬದುಕುವವರು ಏನಾದರೂ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ಸಾವಿತ್ರಿ ಅವರ ಕುಟುಂಬ ಹೆರಿಗೆ ಕೇಂದ್ರ, ವಿಧವೆಯರಿಗೆ ಪುನರ್ವಸತಿ ಕಲ್ಪಿಸಿ ನಾಡಿನ ಗಮನಸೆಳೆದಿದ್ದಾರೆ. ಅಂತಹ ಸಾಧಕಿ ಮಹಿಳೆಯ ಸಾಧನೆ ಕೆಲ ವರ್ಷಗಳಿಂದೀಚೆಗೆ ಪ್ರವರ್ಧಮಾನಕ್ಕೆ ಬಂದಿದೆ ಎಂದರು. ಗದಗ ಲಡಾಯಿ ಪ್ರಕಾಶನದ ಬಸವರಾಜ್ ಅವರಿಂದ ಸಾವಿತ್ರಿ ಬಾಯಿಪುಲೆ ಪುಸ್ತಕಗಳನ್ನು ಎರಡು ಹಾಸ್ಟೆಲ್ಗಳಿಗೆ ಕೊಡುಗೆ ನೀಡಲಾಯಿತು.
ಸಮಾಜಕಲ್ಯಾಣ ಇಲಾಖೆ ನಿಲಯ ಮೇಲ್ವಿಚಾರಕ ಎನ್.ಜಿ.ಬಸವರಾಜ್, ಬಿಸಿಎಂ ಹಾಸ್ಟೆಲ್ ನಿಲಯ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ, ಜೆಸಿಐ ಸ್ಪೂರ್ತಿ ಸಂಸ್ಥೆ ಅಧ್ಯಕ್ಷ ಟಿ.ಎಂ.ವೀರೇಶ್ ಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಡಿ.ವಿಶ್ವನಾಥ್ ಹಾಗೂ ವಿದ್ಯಾರ್ಥಿಗಳಿದ್ದರು.