ಶಿಕ್ಷಣ ಕ್ಷೇತ್ರದಲ್ಲಿ ಸಾಮರಸ್ಯ ಅಗತ್ಯ:ಪದ್ಮಾಲಯ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜು.09:  ಇಂದಿನ ಆಧುನಿಕ ಸಮಾಜದಲ್ಲಿ ಸಹಬಾಳ್ವೆಗೆ ಪ್ರತಿಕೂಲದ ವಾತಾವರಣವಿರುವುದರಿಂದ ಸಹಬಾಳ್ವೆಯ ಸಮಾಜ ಕಟ್ಟಲು ಕಷ್ಟವಾಗಿದೆ. ಇದಕ್ಕೆ ಇಂದಿನ ಹೊಸ ಶಿಕ್ಷಣ ನೀತಿ, ತತ್ವ ಎಲ್ಲವೂ ಕಾರಣವಾಗುತ್ತವೆ ಎಂದು ಕೋಲಾರದ ಸಂಸ್ಕೃತಿಕ ಚಿಂತಕ ಪದ್ಮಾಲಯ ನಾಗರಾಜ್ ಹೇಳಿದರು.
ಪಟ್ಟಣದ ಶ್ರೀಮರುಳಸಿದ್ದೇಶ್ವರ ಸಭಾಭವನದಲ್ಲಿ ಶನಿವಾರ ಸ್ಥಳೀಯ ಬಯಲು ಸಾಹಿತ್ಯ ವೇದಿಕೆಯ ನಾವು ನಮ್ಮಲ್ಲಿ ೨೦೨೩ರ ಸಹಬಾಳ್ವೆಯ ಕಥನಗಳು ಕಾರ್ಯಕ್ರಮದ ಸಹಬಾಳ್ವೆಯ ಬೇರುಗಳು ಕುರಿತು ಉಪನ್ಯಾಸ ನೀಡಿದರು.
ನಮ್ಮ ದೀರ್ಘಕಾಲದ ಸಂಸ್ಕೃತಿಯ ಚರಿತ್ರೆಯನ್ನು ಅವಲೋಕಿಸಿದಾಗ, ಎರಡು ದೋರಣೆಗಳು ಎದರುರಾಗುತ್ತವೆ. ಒಂದು ಮತೀಯತೆ ಜನರ ಮನಸ್ಸಿನಲ್ಲಿ ಕ್ಷುಲ್ಲಕ ಭ್ರಮೆಗಳು ಮತ್ತು ಭಾವನೆಗಳನ್ನು ಸೃಷ್ಟಿಸಿ, ಜನರನ್ನು ವಿಂಗಡಿಸಿದರೆ, ಮಾನವೀಯತೆ ಮತೀಯತೆಯನ್ನು ಮೀರಿ ಸಮಾಜದಲ್ಲಿ ಸಹಬಾಳ್ವೆಯನ್ನು ಮೂಡಿಸಿ ಒಗ್ಗೂಡಿಸುತ್ತದೆ ಎಂದರು.
ಸಹಬಾಳ್ವೆಯ ತತ್ವ ಸಿದ್ದಾಂತಗಳು ಸಮಾಜಕ್ಕೆ ಎಲ್ಲವನ್ನು ಅರ್ಪಿಸುತ್ತದೆ. ಬುದ್ದ ಇದನ್ನು ಮಾಡಿದ್ದು, ನಂತರ ಬಸವಣ್ಣ ನಿರ್ಮಿಸಿದ ಮಹಾಮನೆಯಲ್ಲಿ ಎಲ್ಲಾ ವರ್ಗದವರನ್ನೇ ಕೂಡಿಸಿ ಕಾಯಕಮಾಡಿ ಎಲ್ಲರಿಗೂ ಹಂಚಿ ತಿನ್ನುವ ತತ್ವವನ್ನು ಸಾರಿದರು ಎಂದರು.
ದುಡಿಯುವಿಕೆ ಮತ್ತು ಹಂಚಿಕೊಂಡು ತಿನ್ನುವಿಕೆಯಲ್ಲಿ ಸಹ ಸಮಾಜ ನಿರ್ಮಾಣ ಮತ್ತು ಸಹಬಾಳ್ವೆ ಮತ್ತು ನಿಜವಾದ ಶಾಂತಿ ಇರುತ್ತದೆ ಇದನ್ನು ಸೂಫಿ ಸಂತರಲ್ಲಿ ಕಾಣಬಹುದು ಎಂದರು.
ಕೊಟ್ಟೂರೇಶ್ವರ ಸ್ವಾಮಿ ದೇಗುಲದಲ್ಲಿ ಶತಮಾನಗಳ ಹಿಂದೆ ಮುಸ್ಲಿಂ ರಾಜಕೊಟ್ಟ ಮಣಿಮಂಚಕ್ಕೂ ಮತ್ತು ಕೊಟ್ಟೂರೇಶ್ವರ ಸ್ವಾಮಿಗೂ ಪೂಜೆ ನಡೆಯುವುದೇ ಸಹಬಾಳ್ವೆಯ ಸಂಕೇತ ಎಂದರು.
ಇಂದಿನ ಆಧುನಿಕ ಶಿಕ್ಷಣಕ್ಕೆ ಸಹಬಾಳ್ವೆ ನಡೆಸುವ ತಾಕತ್ತು ಇಲ್ಲ. ಈ ಜಾತಿವಾದ ಮನಷ್ಯನ್ನು ಬೇರ್ಪಡಿಸುತ್ತದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದರು.
ಡಾ. ಸತೀಶ ಪಾಟೇಲ್ ಮಾತಾನಾಡಿ ಅನಕ್ಷರಸ್ಥರಲ್ಲಿ ಇಂದಿಗೂ ಸಾಮರಸ್ಯೆ ಮತ್ತು ಸಹಬಾಳ್ವೆ ಕಾಣಬಹುದು. ಅಕ್ಷರವಂತರಲ್ಲಿ ಇದು ಕಾಣಲಾಗದು, ಸಮಾಜವನ್ನು ವಿಭಾಗಿಸುವ ಛಿದ್ರಗೊಳಿಸುವ ಮನಸ್ಸುಗಳಿವೆ ಇದು ಇರಬಾರದು ಎಂದರು.
ರಥಕ್ಕೆ ಎಸೆದ ಬಾಳೆಹಣ್ಣನ್ನು ಪ್ರಸಾದವೆಂದು ಹಂಚಿಕೊಂಡು ತಿನ್ನುವಾಗ ಜಾತೀಯತೆ ಕಾಣುವುದಿಲ್ಲ. ಬೇರೆ ಸಂದರ್ಭದಲ್ಲಿ ಜಾತೀಯತೆ ಸೃಷ್ಟಿಯಾಗುತ್ತದೆ ಅಂದರೆ ಇದು ಮನುಷ್ಯನ ಸಂಕುಚಿತಕ್ಕೆ ಸಾಕ್ಷಿ ಎಂದರು.
ವೇದಿಕೆಯಲ್ಲಿ ಬೆಂಗಳೂರಿನ ರಂಗಕರ್ಮಿ ಕೆ.ಪಿ. ಲಕ್ಷ್ಮಣ, ಲೇಖಕ ವಿ.ಎಲ್. ನರಸಿಂಹಮೂರ್ತಿ ಇದ್ದರು.
ಈ ಕಾರ್ಯಕ್ರಮಕ್ಕೂ ಮುಂಚೆ ನಡೆದ ಸಹಬಾಳ್ವೆಯ ಕಥನಕಗಳು ಕಾರ್ಯಕ್ರಮವನ್ನು ಸಂಸ್ಕೃತಿಕ ಚಿಂಚಕ ಕೋಟಿಗಾನಹಳ್ಳಿ ರಾಮಯ್ಯ ಉದ್ಘಾಟಿಸಿ ಉಪನ್ಯಾಸ ನೀಡಿದ ಮೇಲೆ ಪತ್ರಕರ್ತ ಹೃಷಿಕೇಶ್ ಬಹದ್ದೂರು ದೇಸಾಯಿ ಸಾಹಿತಿ ಹುರಿಕಡ್ಲಿ ಶಿವಕುಮಾರ್ ಮಾತನಾಡಿದರು.  ಈ ಸಂದರ್ಭದಲ್ಲಿ ಬಯಲು ಸಾಹಿತ್ಯ ವೇದಿಕೆಯ ಅಧ್ಯಕ್ಷತೆ ನಿರ್ಮಲ ಶಿವನಗುತ್ತಿ  ವಹಿಸಿದ್ದರು.  ಡಾ. ಸತೀಶ ಪಾಟೇಲ್, ರಂಗಕರ್ಮಿ ಕೆ.ಪಿ. ಲಕ್ಷ್ಮಣ, ಲೇಖಕ ವಿ.ಎಲ್. ನರಸಿಂಗಮೂರ್ತಿ ಇದ್ದರು.

One attachment • Scanned by Gmail