ತುಮಕೂರು, ಜು.೧- ಗ್ರಾಮೀಣ ಸಹಭಾಗಿತ್ವ ಸಮೀಕ್ಷೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಹೆಚ್ಚು ಪ್ರಯೋಜನಕಾರಿ ಎಂದು ನಾಯಕತ್ವ ತರಬೇತುದಾರ ಸಿ. ಸಿ. ಪಾವಟೆ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಜ್ಞಾನ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವಶ್ಯಕ ಮಾಹಿತಿಯನ್ನು ಕ್ರೋಢೀಕರಿಸುವ ಈ ವಿಧಾನ ಮಾರುಕಟ್ಟೆ ಕ್ಷೇತ್ರಕ್ಕೆ ಉಪಯೋಗವಾಗಿದೆ. ಇಲ್ಲಿ ಮಾಧ್ಯಮವು ಸಮಾಜ ಮತ್ತು ಉತ್ಪನ್ನಕಾರರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.
ಈ ಸಮೀಕ್ಷೆಯನ್ನು ಶೈಕ್ಷಣಿಕ ಮಟ್ಟದಲ್ಲೇ ಅಳವಡಿಸಿಕೊಂಡು, ಇದರ ಪ್ರಯೋಜನ ಪಡೆದರೆ ಪದವಿಯ ನಂತರ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಉಪಯುಕ್ತವಾಗಲಿದೆ ಎಂದರು.
ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೆ. ವಿ. ಮಾತನಾಡಿ, ಸಮಾಜ ಕಾರ್ಯ, ಸಮೂಹ ಮಾಧ್ಯಮ ಮತ್ತಿತರ ಮಾನವಿಕ ವಿಷಯಗಳು ಪರಸ್ಪರ ಸಂಬಂಧವುಳ್ಳ ಕ್ಷೇತ್ರಗಳಾಗಿದ್ದು ಸಮಾಜದ ಅಭಿವೃದ್ಧಿಗೆ ಸಹಭಾಗಿತ್ವದಿಂದ ಕೆಲಸ ಮಾಡಬಹುದು. ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿಪರ ಮನಸ್ಥಿತಿಯನ್ನು ಸೃಷ್ಟಿ ಮಾಡಲು ಇಂತಹ ಪ್ರಾತ್ಯಕ್ಷಿಕೆಗಳು ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವಣ್ಣ ಬೆಳವಾಡಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ದಾಕ್ಷಾಯಿಣಿ ಜಿ., ವಿದ್ಯಾವಿಷಯಕ ಪರಿಷತ್ ಸದಸ್ಯೆ ಡಾ.ಜಾಯ್ ನೆರೆಲ್ಲಾ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಭಾನುನಂದನ್ ಬಿ. ಸಿ., ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಹೇಮಂತ್‌ಕುಮಾರ್ ಕೆ. ಪಿ., ಡೈಸಿನ್ ಥಾಮಸ್, ಅಶ್ವಿನಿ ಎಂ., ಸಹನಾ ರಮೇಶ್, ಸಿದ್ದೇಶ್ ಸಿ., ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಮಂಗಳ ಮತ್ತಿತರರು ಭಾಗವಹಿಸಿದ್ದರು.