ಶಿಕ್ಷಣ ಕ್ಷೇತ್ರಕ್ಕೆ ಹಣ ವಿನಿಯೋಗಿಸಲು ರಾಜಕಾರಣಿಗಳಿಗೆ ಸಲಹೆ

ಗುಬ್ಬಿ, ಜು. ೨೦- ರಾಜಕಾರಣಿಗಳು ಕೋಟಿಗಟ್ಟಲೆ ಹಣವನ್ನು ಚುನಾವಣೆಗೆ ವೆಚ್ಚ ಮಾಡುವ ಬದಲು ಶಿಕ್ಷಣ ಕ್ಷೇತ್ರಕ್ಕಾದರೂ ವಿನಯೋಗಿಸಿದರೆ ಅವರ ಹೆಸರು ಚಿರಾಯುವಾಗಿ ಉಳಿಯಲಿದೆ ಎಂದು
ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲುಷಿತಗೊಂಡಿರುವ ಸಮಾಜದ ಸ್ವಚ್ಛತೆಗೆ ಶರಣ ತತ್ವಗಳ ಅಗತ್ಯವಿದೆ ಎಂದರು.
ಮುಖಂಡ ಎಸ್. ಡಿ. ದಿಲೀಪ್‌ಕುಮಾರ್ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯವನ್ನು ಮೂಡಿಸಬೇಕು. ತಾಲ್ಲೂಕಿನಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆದರೆ, ಸಹಾಯ ಮಾಡಲು ಸಿದ್ಧನಿದ್ದೇನೆ ಎಂದ ಅವರು, ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ಮಾಡುವ ಜತೆಗೆ ಕಡಿಮೆ ಅಂಕ ತೆಗೆದುಕೊಂಡಿರುವ ಮಕ್ಕಳನ್ನು ಉತ್ತೇಜಿಸುವ ಕೆಲಸವನ್ನು ಸಂಘ ಮಾಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಯಾವುದೇ ಸಮಾಜ ಸದೃಢಗೊಳ್ಳಲು ಶಿಕ್ಷಣ ಮತ್ತು ಸಂಘಟನೆ ಅಗತ್ಯ. ತ್ರಿವಿಧ ದಾಸೋಹವನ್ನು ಉಣಬಡಿಸುವ ಮೂಲಕ ವೀರಶೈವ ಲಿಂಗಾಯತ ಮಠಗಳು ಇತರ ಸಮುದಾಯಗಳಿಗೆ ಮಾದರಿಯಾಗಿವೆ ಎಂದರು.
ಶಿವಬಸವ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಯೋಗಾನಂದ್ ಮಾತನಾಡಿ, ವೀರಶೈವ ಲಿಂಗಾಯತ ನೌಕರರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ಸಂಘದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಮಾಜದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸಂಘದಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಮುಖಂಡರಾದ ಚಂದ್ರಶೇಖರಬಾಬು, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಯತೀಶ್,ವೀರಶೈವ ಲಿಂಗಾಯತ ನೌಕರರ ರಾಜ್ಯಾಧ್ಯಕ್ಷ ಎಂ.ಬಿ. ಶಿವಶಂಕರಪ್ಪ, ಶಿವಬಸವ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಗಂಗಾಧರ್, ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಗಂಗಾಧರಯ್ಯ, ಕಾರ್ಯದರ್ಶಿ ರವೀಶ್, ಖಜಾಂಚಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.