ಶಿಕ್ಷಣ ಕ್ಷೇತ್ರಕ್ಕೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೊಡುಗೆ ಅಪಾರ

ಸಂಜೆವಾಣಿ ವಾರ್ತೆ

ದಾವಣಗೆರೆ. ಆ.೨೧; ಮಧ್ಯ ಕರ್ನಾಟಕದಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚಲು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೊಡುಗೆ ಅಪಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ಅಭಿಪ್ರಾಯಪಟ್ಟರು. ಆನಗೋಡು ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ವರ್ಗಾವಣೆಗೊಂಡ ಶಿಕ್ಷಕರ ಸ್ವಾಗತ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ   ಭಾಗವಹಿಸಿ ಮಾತನಾಡಿದರು.ಶ್ರೀ ಶಿವಕುಮಾರ  ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿಯ ಫಲವಾಗಿ ಇಂದು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಐವತ್ತು ವರ್ಷಗಳ ಹಿಂದೆ ಶಿಕ್ಷಣ ಸಾರ್ವತ್ರಿಕ ವಾಗಿರಲಿಲ್ಲ. ನಗರಗಳಲ್ಲಿ ಮಾತ್ರ ಪ್ರೌಢಶಾಲೆಗಳಿದ್ದವು. ಅಂತಹ ಸಂದರ್ಭದಲ್ಲಿ  ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆದು ಉಚಿತ ಶಿಕ್ಷಣ ನೀಡಿದರು. ತರಗತಿಯ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣವನ್ನು ನೀಡುವುದು ಶ್ರೀಗಳ ಆಶಯವಾಗಿತ್ತು. ಅದಕ್ಕಾಗಿಪೂಜ್ಯರು ಸ್ವತಃ ವಿದ್ಯಾರ್ಥಿಗಳು, ನೌಕರರೊಂದಿಗೆ ಸೇರಿ ಶ್ರಮದಾನ ಮೂಲಕ   ಶಾಲಾ ಕಾಲೇಜುಗಳ   ಕಟ್ಟಡಗಳನ್ನು ಕಟ್ಟಿದರು ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಎಚ್ ರವಿ ವಹಿಸಿದ್ದರು. ವರ್ಗಾವಣೆಗೊಂಡ ಮಂಜುನಾಥ್, ಮಾರುತೇಶ್, ಪ್ರಸನ್ನಕುಮಾರ್, ಬಾಬು ಬುಡೆನ್ , ಶಿವಕುಮಾರ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ನೂತನವಾಗಿ ಆಗಮಿಸಿದ ಶಿಕ್ಷಕರಾದ ನಾಗರಾಜ ಸಿರಿಗೆರೆ, ವೇದಮೂರ್ತಿ, ಡಾ. ವಿಜಯ ಕುಮಾರ್, ಸುವರ್ಣ, ಪುಟ್ಟಪ್ಪನವರನ್ನು ಶಾಲಾ ಮಕ್ಕಳಿಗೆ ಪರಿಚಯಿಸಿ, ಸ್ವಾಗತಿಸಲಾಯಿತು.ಸಮಾರಂಭದಲ್ಲಿ ಸುಭಾಷ್ ಮೆಳ್ಳೆಕಟ್ಟೆ, ಸಿಂಗಾಪುರ ಪರಮೇಶ್ವರಪ್ಪ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಮಾನಸ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು, ಸಹ ಶಿಕ್ಷಕಿ ಕೆ ಎಸ್ ಮಮತ ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ವೇದಮೂರ್ತಿ ವಂದಿಸಿದರು.