ಶಿಕ್ಷಣ ಕ್ರಾಂತಿಯ ಮುಖಾಂತರ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ

ಕಲಬುರಗಿ:ಜ.4:ನಗರದ ಸತ್ಯಂ ಪಿ.ಯು ಕಾಲೇಜು ಹಾಗು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಸತ್ಯಂ ಪಿ.ಯು ಕಾಲೇಜಿನಲ್ಲಿ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನಾಚರಣೆ ಆಚರಿಸಲಾಯಿತು. ಡಾ. ಅಶೋಕ ಗುತ್ತೇದಾರ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಹಿತಿ ಡಾ. ಚಿ.ಸಿ ನಿಂಗಣ್ಣ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಸಾವಿತ್ರಿಬಾಯಿ ಫುಲೆಯವರು 3-1-1831 ಖಂಡೋಜಿ ನವಶಿ ಪಾಟೀಲ-ಲಕ್ಷ್ಮಿಬಾಯಿ ದಂಪತಿಗಳ ಉದರದಲ್ಲಿ ಸತಾರ ಜಿಲ್ಲೆ ನಯಿಗಾಂವ ಗ್ರಾಮದಲ್ಲಿ ಜನಿಸಿದರು, ಮುಂದೆ 9ನೇ ವರ್ಷಕ್ಕೆ ಇವರಿಗೆ 14 ವರ್ಷದ ವಯಸ್ಸಿನ ಜ್ಯೋತಿಬಾ ಫುಲೆ ಅವರೊಂದಿಗೆ ಬಾಲ್ಯ ವಿವಾಹ ಮಾಡಲಾಯಿತು. ಶಿಕ್ಷಣ ಪಡೆದು ವಿದ್ಯಾವಂತರಾದ ಜ್ಯೋತಿಬಾ ಫುಲೆ ಸಮಾಜದಲ್ಲಿನ ಜಾತಿಪದ್ಧತಿ, ಮೌಡ್ಯ ಸಂಪ್ರದಾಯಗಳ ಆಚರಣೆ, ಶೋಷಣೆ, ಅನ್ಯಾಯ, ಉಳ್ಳವರ ದೌರ್ಜನ್ಯ ಕಂಡು ಜಾಗೃತರಾಗುತ್ತಾರೆ. ಹೀಗಾಗಿ ಈ ಅಸಮಾನತೆಯನ್ನು ಸರಿಪಡಿಸಲು ಚಿಂತಿಸಿ ಮೊದಲು ತಮ್ಮ ಮನೆಯಿಂದಲೇ ಅಕ್ಷರಕ್ರಾಂತಿ ಪ್ರಾರಂಭಿಸುತ್ತಾರೆ. ಸಾವಿತ್ರಿಬಾಯಿ ಫುಲೆ ಅವರಿಗೆ ಅಕ್ಷರ ಜ್ಞಾನ ನೀಡುತ್ತಾರೆ. ಮುಂದೆ ಅಹ್ಮದನಗರ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ತರಬೇತಿಯನ್ನು ಕೊಡಿಸುತ್ತಾರೆ. 01/01/1848 ರಲ್ಲಿ ಪುಣೆಯ ಭಿಡೆವಾಡಿಯಲ್ಲಿ ಕೆಳವರ್ಗದ ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸುತ್ತಾರೆ. ಆ ಶಾಲೆಗೆ ಪ್ರಥಮ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಸೇವೆಗೆ ನೇಮಕರಾಗಿ ಪತಿಯ ಸಮಾಜ ಪರವರ್ತನಾ ಸುಧಾರಣೆಗೆ ಮುಂದಾಗುತ್ತಾರೆ. ದೇಶದಲ್ಲಿ ಪ್ರಥಮ ಭಾರಿಗೆ ಶಾಲೆಗಳನ್ನು ಪ್ರಾರಂಭಿಸಿ ಶೂದ್ರಾದಿಶೂದ್ರ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದಾಗ ಬ್ರಾಹ್ಮಣಶಾಹಿ ವರ್ಗದವರ ವಕ್ರದೃಷ್ಟಿ ಇವರ ಮೇಲೆ ಬೀಳುತ್ತದೆ, ಅವರು ಕೊಡುವ ಪ್ರಾಣಭಯ, ಅಪಮಾನ-ಸಂಕಟಗಳನ್ನು ಮೆಟ್ಟಿನಿಂತು, ಧೈರ್ಯದಿಂದ ಮುಂದೆ ಸಾಗಿ ಶಿಕ್ಷಣ ಕ್ರಾಂತಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಮೇಲ್ವರ್ಗದವರು ಸಮಾಜ ಬಹಿಷ್ಕಾರ ಹಾಕಿದರು ಕೂಡಾ ಹೆದರದೆ ಶಿಕ್ಷಣ ಸೇವೆಯನ್ನು ಮುಂದೆವರಿಸುತ್ತಾರೆ. ಹತ್ತಾರು ಶಾಲೆಗಳನ್ನು ಪ್ರಾರಂಭಿಸುತ್ತಾರೆ. ಜಾತಿ ವ್ಯವಸ್ಥೆಯ ಮಧ್ಯ ಶೈಕ್ಷಣಿಕ ಕ್ರಾಂತಿ ಮಾಡಿರುವ ಸಾವಿತ್ರಿಬಾಯಿ ಫುಲೆ ಅವರ ಸೇವೆಯನ್ನು ಅಂದಿನ ಬ್ರಿಟಿಷ್ ಸರಕಾರ ಗುರುತಿಸಿ ಭಾರತ ದೇಶದ ಪ್ರಥಮ ಉತ್ತಮ ಶಿಕ್ಷಕಿ ಎಂಬ ಪ್ರಶಸ್ತಿಯನ್ನು ನೀಡಿ ಸಾವಿತ್ರಿಬಾಯಿ ಫುಲೆಯವರನ್ನು ಗೌರವಿಸುತ್ತದೆ. ಸಮಾಜ ಸುಧಾರಣೆಗಾಗಿ ಮುಂದಾಗಿ ಬಾಲ್ಯವಿವಾಹ, ವಿಧವೆಯರು ತಲೆಬೋಳಿಸುವ ಪದ್ಧತಿಯನ್ನು ನಿಲ್ಲಿಸಲು ಹೋರಾಟ ಮಾಡುತ್ತಾರೆ. ಅಸ್ಪøಶ್ಯ ಸಮುದಾಯಗಳ ಶಿಕ್ಷಣಕ್ಕಾಗಿ ಸಮಾಜ, ಎಂಬ ಸಂಸ್ಥೆಯಡಿಯಲ್ಲಿ ಸಮಾಜ ಸುಧಾರಣೆಯಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾರೆ. ಅನಾಥಾಶ್ರಮ, ಬಾಲ್ಯ ಪ್ರತಿಬಂಧಕ ಗೃಹ, ಪ್ರಸೂತಿ ಗೃಹವನ್ನು ಸ್ಥಾಪನೆ ಮಾಡಿ ಆಶ್ರಯ ನೀಡಿರುವುದು ಸಾಮಾನ್ಯವಾದ ಮಾತಲ್ಲ. ಪುರೋಹಿತಶಾಹಿಗಳು ಸೃಷ್ಠಿಸಿದ ಕಾನೂನುಗಳನ್ನು ಸಡಿಲಗೊಳಿಸುತ್ತ ಕೆಳವರ್ಗದ ಬಾಲಕಿಯರಿಗೆ ಶಾಲಾ ಶಿಕ್ಷಣ ನೀಡುತ್ತಾ, ಪುರುಷ ಪ್ರಧಾನ ಸಮಾಜ, ಮಡಿವಂತಿಕೆ ಸಮಾಜವನ್ನು ಎದರು ಹಾಕಿಕೊಂಡು ಅಕ್ಷರ ಕ್ರಾಂತಿಯನ್ನು ಮಾಡಿ ಮಹಿಳಾಸಬಲೀಕರಣಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಅಕ್ಷರದ ಅವ್ವ ಸಾವಿತ್ರಿ ಫುಲೆಯವರು ಮಹಾಮಾನವತಾವಾದಿಗಳು, ಅಕ್ಷರ ಜ್ಯೋತಿ ಬೆಳಗಿಸಿದ ಸಾವಿತ್ರಿಬಾಯಿ ಫುಲೆ ಅವರು ಭಾರತದ ಪ್ರಥಮ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆ ಅನುಪಮವಾದುದು, ಆದರ್ಶವಾದುದು, ಅನುಕರಣೀಯವಾದುದು, ಅವರನ್ನು ಮಹಿಳಾ ವರ್ಗ, ಇಡೀ ಶೋಷಿತವರ್ಗ ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪ.ಮಾನು ಸಗರ, ಹಣಮಂತ ಯಳಸಂಗಿ, ಸುರೇಶ ಬಡಿಗೇರ ಉಪಸ್ಥಿತರಿದ್ದರು, ಕಾಲೇಜಿನ ಪ್ರಾಂಶುಪಾಲರಾದ ಬಿ.ಎಚ್. ನಿರಗುಡಿಯವರು ಅದ್ಯಕ್ಷತೆ ವಹಿಸಿಕೊಂಡಿದ್ದರು. ಆರಂಭದಲ್ಲಿ ಡಿ.ಕೆ. ಮದನಕರ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಶಿವಲಿಂಗಪ್ಪ ಚಳಗೇರಿ ಕಾರ್ಯಕ್ರಮ ನಿರೂಪಿಸಿದರು, ಮಲ್ಲಿಕಾರ್ಜುನ ಬಂಡಾರಿ ವಂದಿಸಿದರು. ವೆಂಕಟೇಶ ನೀರಡಗಿ, ಗುರು ಮಳಗೆ, ವಸಂತ ಲೇಂಗಟಿ, ಶ್ರೀಕಾಂತ ರೆಡ್ಡಿ, ಬಿ.ಎಸ್. ಮಾಲೀ ಪಾಟೀಲ, ಸಿದ್ದರಾಮ ಹೊನಕಲ್ಲ, ಮೋಹನ ಚಿನ್ನಾ ಇತರರು ಭಾಗವಹಿಸಿದರೆಂದು ತಿಳಿಸಿದ್ದಾರೆ.