ಶಿಕ್ಷಣ ಕಲಿಕೆಯೊಂದಿಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಇರಲಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ .ಏ.11 :- ಶಿಕ್ಷಣ ಕಲಿಕೆಯ ಜತೆಗೆ ಮಕ್ಕಳ ಬಾಲ್ಯಾವಸ್ಥೆಯಲ್ಲಿ ಸಂಗೀತ, ನೃತ್ಯ, ಗಾಯನದಂಥ ಅನೇಕ ಪಠ್ಯೇತರ ಚಟುವಟಿಕೆಗಳೊಂದಿಗೆ ಬೆಳೆದಾಗ ಅವರಲ್ಲಿ ಬೌದ್ಧಿಕಮಟ್ಟ ಹೆಚ್ಚುತ್ತದೆ ಎಂದು ಕಾನಹೊಸಹಳ್ಳಿ ಶ್ರೀ ಶರಣೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ ತಿಳಿಸಿದರು.
ತಾಲೂಕಿನ ಕಾನಹೊಸಹಳ್ಳಿಯಲ್ಲಿನ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಚಿಣ್ಣರ ನೃತ್ಯ, ಸಂಗೀತ ಕಲಿಕೆಯ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ  ಮಕ್ಕಳು ಆಟದೊಂದಿಗೆ ಪಾಠ ಕಲಿಸುತ್ತ ಪಾಲಕರು ಗಮನಹರಿಸಿದಾಗ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗಲಿದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಒಂದು ತಿಂಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಿ, ರಾಜ್ಯ ಮಟ್ಟದ ಕಲಾವಿದರಿಂದ ನೃತ್ಯ, ಸಂಗೀತ, ಕರಾಟೆ ಸೇರಿ ನಾನಾ ಚಟುವಟಿಕೆಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಪತ್ರಕರ್ತ ಹುಡೇಂ ಕೃಷ್ಣಮೂರ್ತಿ ಮಾತನಾಡಿ, ಪಟ್ಟಣಗಳಲ್ಲಿ ಸಿಗುವಂಥ ಸೌಲಭ್ಯಗಳು ಹಳ್ಳಿಗಾಡಿನ ಮಕ್ಕಳಿಗೆ ಮರೀಚಿಕೆಯಾಗಲಿವೆ. ಆದರೆ, ಕಾನಹೊಸಹಳ್ಳಿಯಂಥ ಹೋಬಳಿ ಕೇಂದ್ರದಲ್ಲಿ ನುರಿತ ಕಲಾವಿದರನ್ನು ಕರೆಸಿ ಬೇಸಿಗೆ ಶಿಬಿರದ ಮೂಲಕ ಮಕ್ಕಳ ಕ್ರಿಯಾಶೀಲ ಚಟುವಟಿಕೆ ಹಾಗೂ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡಲು ಶರಣೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ ಎಂದರು.
 ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಭೀಮಣ್ಣ ಗಜಾಪುರ, ಚುಟುಕು ಸಾಹಿತಿ ಯು.ನಾಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಶರಣೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ಹರ್ಷವರ್ಧನ, ಡಿಕೆ ಡ್ಯಾನ್ಸ್ ತರಬೇತುದಾರ ಕರ್ಣ, ಗಾಯಕ ಮಹೇಶ್, ರಾಘವೇಂದ್ರ, ಕೆ.ಎಂ.ಎಸ್ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಸುದರ್ಶನ, ಶಿಕ್ಷಕಿ ಶಾಜೀದಾ ಸೇರಿ ಇತರರಿದ್ದರು.

One attachment • Scanned by Gmai