ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಮಮತಾ ನಾಯಕ ಅಧಿಕಾರ ಸ್ವೀಕಾರ


ಧಾರವಾಡ ನ.22-: ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯುವ್ಯ ಕರ್ನಾಟಕ ಶೈಕ್ಷಣಿಕ ವಲಯದ ಆಯುಕ್ತರ ಕಚೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನೂತನ ನಿರ್ದೇಶಕರಾಗಿ ಕೆ.ಇ.ಎಸ್. ಹಿರಿಯ ಶ್ರೇಣಿ ಅಧಿಕಾರಿ ಮಮತಾ ನಾಯಕ ಶನಿವಾರ ಅಧಿಕಾರ ಸ್ವೀಕರಿಸಿದರು.
1994ರಲ್ಲಿ ಕೆ.ಇ.ಎಸ್. ತೇರ್ಗಡೆಯಾಗಿ ಉ.ಕ. ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸರಕಾರಿ ಸೇವೆ ಆರಂಭಿಸಿದರು. ನಗರದ ಡಯಟ್ ಉಪನ್ಯಾಸಕರಾಗಿ ಸೇವೆಸಲ್ಲಿಸಿ, ಬಿಇಓ ಹುದ್ದೆಗೆ ಪದೋನ್ನತಿ ಹೊಂದಿ ಕಾರವಾರ ತಾಲೂಕಿನ ಬಿಇಓ ಆಗಿ ಸೇವೆ ಸಲ್ಲಿಸಿದರು. ನಗರದ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ, ಧಾರವಾಡ ಡಯಟ್ ಉಪಪ್ರಾಚಾರ್ಯರಾಗಿ ಸೇವೆಗೈದಿದ್ದಾರೆ.
ಡಿಡಿಪಿಐ ಹುದ್ದೆಗೆ ಪದೋನ್ನತಿ ಪಡೆದು, ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ)ದ ಸಮಾನಾಂತರ ಹುದ್ದೆಯಲ್ಲಿ ರೀಡರ್ ಆದರು. ನಗರದ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಮತ್ತು ಹಾವೇರಿ ಜಿಲ್ಲೆಯ ಆಡಳಿತ ಉಪನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ. ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ಬೆಳಗಾವಿಯ ಸಿಟಿಇ ಪ್ರಾಚಾರ್ಯರಾಗಿ ಮತ್ತು ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ನಿಕಟಪೂರ್ವದಲ್ಲಿ ಬೆಂಗಳೂರಿನ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು.
ಆಯುಕ್ತರ ಕಚೇರಿಯ ನಿರ್ದೇಶಕರ ಹುದ್ದೆಯು ಬೆಳಗಾವಿ ವಿಭಾಗದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ ಕಂದಾಯ ಜಿಲ್ಲೆಗಳು, ಶಿರಸಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಆಯುಕ್ತರ ಕಚೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಿರ್ದೇಶಕರಾಗಿದ್ದ ಡಾ.ಬಿ.ಕೆ.ಎಸ್. ವರ್ಧನ್ ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.
ಅಭಿನಂದನೆ : ವಿವಿಧ ಶಿಕ್ಷಣಾಧಿಕಾರಿಗಳು, ಶೈಕ್ಷಣಿಕ ಸಂಘ-ಸಂಸ್ಥೆಗಳು ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ನೂತನ ನಿರ್ದೇಶಕರಾದ ಮಮತಾ ನಾಯಕ ಅವರನ್ನು ಗೌರವಿಸಿ ಅಭಿನಂದಿಸಿದರು.