ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಬಾದಾಮಿ,ಜು.22: ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಕೂಡಲೇ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ ವಿತರಿಸಬೇಕು ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ ಅನುಷ್ಟಾನಾಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ತಾ.ಪಂ.ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಶಾಲಾ ಮಕ್ಕಳಿಗೆ ಆಯುಷ್ಮಾನ್ ಕಾರ್ಡ ಜೊತೆಗೆ ಆರೋಗ್ಯ ತಪಾಸಣೆ ಮಾಡಬೇಕು. 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಬೇಕು. ಮಹಿಳಾ ಶಿಕ್ಷಕರಿಗೆ ಆರೋಗ್ಯ ತಪಾಸಣೆ ಮಾಡಬೇಕು ಎಂದು ಅವರು ಹೇಳಿದರು.
ಈಲ್ಲೆಯ ಎಲ್ಲ ತಾಲೂಕಿಗಿಂತ ಕಡಿಮೆ ಪ್ರಗತಿ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಕೂಡಲೇ ಶೇ100 ಕ್ಕೆ 100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ ಮಾತನಾಡಿ ಆರೋಗ್ಯ, ಮಹಿಳಾ ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆಯ ಜೊತೆಗೆ ಸಮನ್ವಯದೊಂದಿಗೆ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆರ್.ಎಸ್.ಆದಾಪೂರ ಮಾತನಾಡಿ ತಾಲೂಕಿನಲ್ಲಿ 60 ವರ್ಷ ಮೇಲ್ಪಟ್ಟ ಅಡಿಗೆ ಸಿಬ್ಬಂದಿಯನ್ನು ರಾಜ್ಯ ಕಚೇರಿಯ ಆದೇಶದಂತೆ ಬಿಡುಗಡೆ ಮಾಡಲಾಗಿದ್ದು, ಖಾಲಿ ಇರುವ ಅಡಿಗೆ ಸಿಬ್ಬಂದಿ ನೇಮಕ ಮಾಡಲು ಸಂಬಂಧಿಸಿದ ನೇಮಕಾತಿ ಸಮಿತಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಮಾತನಾಡಿ ಲಸಿಕೆ, ಮಹಿಳಾ ಶಿಕ್ಷಕರ ಆರೋಗ್ಯ ತಪಾಸಣೆ ಕುರಿತು ಮಾಹಿತಿ ನಿಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ ಮಾತನಾಡಿದರು. ಇನ್ನೊರ್ವ ದೈಹಿಕ ಶಿಕ್ಷಣ ಪರಿವೀಕ್ಷಕಿ ಕಂದಗನೂರ ಹಾಜರಿದ್ದರು. ಸಭೆಯಲ್ಲಿ ತಾಲೂಕಿನ ಎಲ್ಲ ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮನ್ವಯ ಶಿಕ್ಷಣ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು. ಶಿಕ್ಷಣ ಸಂಯೋಜಕ ವಿ.ಎಸ್.ಹಿರೇಮಠ ನಿರೂಪಿಸಿ, ವಂದಿಸಿದರು.