ಶಿಕ್ಷಣ ಇಲಾಖೆಗೆ ಖಾಯಂ ಆಯುಕ್ತರ ನಿಯುಕ್ತಿಗೆ ನಮೋಶಿ ಆಗ್ರಹ

ಕಲಬುರಗಿ,ಆ.04:ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿಯ ಆಯುಕ್ತಾಲಯಕ್ಕೆ ಪೂರ್ಣಕಾಲಿಕ ಆಯುಕ್ತರನ್ನು ನಿಯುಕ್ತಿಗೊಳಿಸಬೇಕು ಎಂದು ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಒತ್ತಾಯಿಸಿದ್ದಾರೆ.
ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆಯ ಹುದ್ದೆಯು ಸಾಕಷ್ಟು ದಿನದಿಂದ ಖಾಲಿ ಇದ್ದು, ಇದರ ಪ್ರಭಾರವನ್ನು ಕಲ್ಯಾಣ ಕರ್ನಾಟಕ ಅಭಿವೃದ್ದಿಯ ಮಂಡಳಿಯ ಉಪ ಕಾರ್ಯದರ್ಶಿ ಆನಂದ್ ಪ್ರಕಾಶ್ ಮೀನಾ ಅವರಿಗೆ ನೀಡಲಾಗಿದೆ. ಆದರೆ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿರುವ ವಿವಿಧ ಹುದ್ದೆಗಳ ಪ್ರಭಾರವನ್ನು ನೀಡಲಾಗಿದೆ. ಸದರಿಯವರಿಗೆ ಮೂರು ಹುದ್ದೆಗಳ ಪ್ರಭಾರ ಇರುವುದರಿಂದ ಹೆಚ್ಚಿನ ಸಮಯ ನೀಡಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಆದ್ದರಿಂದ ಏಳು ಜಿಲ್ಲೆಗಳ ಶಿಕ್ಷಣ ಇಲಾಖೆಯ ಕಡತಗಳು ಬಾಕಿ ಇಲ್ಲವೇ ವಿಳಂಬ ಆಗುತ್ತಿವೆ ಎಂದು ಅವರು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರೌಢ ಶಾಲಾ ಮುಖ್ಯಗುರುಗಳು ನಿವೃತ್ತಿ ನಂತರ ಬೇ ಬಾಕಿ ಪ್ರಮಾಣ ಪತ್ರ ವಿಳಂಬವಾಗಿದ್ದರಿಂದ ಅವರಿಗೆ ಪಿಂಚಣಿ ಉಪದಾನಗಳು ಸಿಗುತ್ತಿಲ್ಲ. ಶಿಕ್ಷಕರಿಗೆ ನೀಡಿದ ಮುಖ್ಯಗುರುಗಳ ಪ್ರಭಾರ ಭತ್ಯೆ ಮಂಜೂರಾತಿ ಆಗುತ್ತಿಲ್ಲ.ವಿವಿಧ ತರಹದ ಬೋಧಕ ಮತ್ತು ಬೋಧಕೇತರ ಬಡ್ತಿಗಳು ಕಡತ ಬಾಕಿ ಇವೆ. ಖಾಸಗಿ ಶಾಲೆಗಳ ಅನುಮತಿ ಮತ್ತು ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಕಡತ ಹಾಗೂ 2006ರ ಏಪ್ರಿಲ್ 1ರ ಮುಂಚೆ ಹಾಜರಾದ ಶಿಕ್ಷಕರ ಎನ್‍ಪಿಎಸ್‍ರಿಂದ ಓಪಿಎಸ್ ಕಡತಗಳು ಬಾಕಿ ಹಾಗೂ ವಿಳಂಬವಾಗುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಆದ್ದರಿಂದ ತಕ್ಷಣವೇ ಸರ್ಕಾರವು ಎಚ್ಚೆತ್ತು ಕೂಡಲೇ ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿಯ ಆಯುಕ್ತಾಲಯಕ್ಕೆ ಪೂರ್ಣಕಾಲಿಕ ಆಯಕ್ತರನ್ನು ನಿಯುಕ್ತಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.