ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ: ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್‌ ಭರವಸೆ

ಬೀದರ್:ಜು.24: ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೆ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ನಗರದ ಝೀರಾ ಕನ್ವೆನ್ಷನ್‌ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನಾಗರಿಕ ಸನ್ಮಾನ ಮಾಡಲಾಯಿತು.

ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಸಚಿವದ್ವಯರು, ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆ.ಎಲ್ಲರ ಸಲಹೆ ಪಡೆದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ರಾಜ್ಯ ಅಭಿವೃದ್ಧಿ ಹೊಂದಿರುವ ಪ್ರಮುಖ ಐದು ಜಿಲ್ಲೆಗಳ ಸಾಲಿಗೆ ತರಲು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈಶ್ವರ ಖಂಡ್ರೆ ಮಾತನಾಡಿ, ಹಿಂದಿನ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ₹3 ಸಾವಿರ ಕೋಟಿ ಅನುದಾನ ಘೋಷಿಸಿದರೂ ಸಹ ಅದನ್ನು ಖರ್ಚು ಮಾಡಿರಲಿಲ್ಲ. ಆದರೆ, ನಮ್ಮ ಸರ್ಕಾರ ಅವರಂತೆ ಮಾಡುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದ ₹5 ಸಾವಿರ ಕೋಟಿಯಲ್ಲಿ ನಮ್ಮ ಜಿಲ್ಲೆಯ ಪಾಲು ಪಡೆದು, ಅದನ್ನು ಮುಂದಿನ ಮಾರ್ಚ್‌ನೊಳಗೆ ಖರ್ಚು ಮಾಡಲಾಗುವುದು. ಎಲ್ಲರ ಸಲಹೆ ಪಡೆದು ಯೋಜನೆಗಳನ್ನು ರೂಪಿಸಲಾಗುವುದು. ಇದರಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳ ಕೊಠಡಿಗಳು ಸೋರುತ್ತಿವೆ. ಅವುಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಕೊಡಲಾಗುವುದು. ಹಿಂದಿನ ಸರ್ಕಾರ ಒಂದೇ ಒಂದು ಹುದ್ದೆ ತುಂಬಿರಲಿಲ್ಲ. 40 ಸಾವಿರ ಹುದ್ದೆಗಳನ್ನು ತುಂಬಲಾಗುವುದು. ಈ ಭಾಗದ ನಿರುದ್ಯೋಗಿ ಯುವಕರಿಗೆ ನೌಕರಿ ಒದಗಿಸಿ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲಾಗುವುದು ಎಂದು ಹೇಳಿದರು.

ಕೋವಿಡ್‌ನಲ್ಲಿ ನಮ್ಮ ಆರೋಗ್ಯ ವ್ಯವಸ್ಥೆ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಶೀಘ್ರದಲ್ಲೇ ನಾನು ಮತ್ತು ರಹೀಂ ಖಾನ್‌ ಅವರು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಮಟ್ಟದಲ್ಲಿ ಟ್ರಾಮಾ ಕೇರ್‌ ಸೆಂಟರ್‌ ಸ್ಥಾಪಿಸಬೇಕಿದೆ. ಇದಾದರೆ ತುರ್ತು ಚಿಕಿತ್ಸೆ ಸಿಗುತ್ತದೆ. ಹೈದರಾಬಾದ್, ಮುಂಬೈಗೆ ಹೋಗುವುದು ತಪ್ಪುತ್ತದೆ. ಜೊತೆಗೆ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಕ್ರಮ ಜರುಗಿಸಲಾಗುವುದು. ಬೀದರ್‌ ವಿಶ್ವವಿದ್ಯಾಲಯದ ಅಭಿವೃದ್ಧಿ ಕೂಡ ಮಾಡಲಾಗುವುದು. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ವಿ.ವಿ.ಯನ್ನು ಘೋಷಿಸಿ ₹2 ಕೋಟಿ ಅನುದಾನ ನೀಡಿತು. ಆದರೆ, ಒಂದು ವಿಶ್ವವಿದ್ಯಾಲಯಕ್ಕೆ ಕನಿಷ್ಠ ₹500 ಕೋಟಿಯಾದರೂ ಅನುದಾನ ಸಿಗಬೇಕಿದೆ. ಹೀಗಾದಾಗ ಗುಣಾತ್ಮಕ ಶಿಕ್ಷಣ ಕೊಡಲು ಸಾಧ್ಯ. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ತುಂಬಲಾಗುವುದು. ಮಕ್ಕಳ ಆಂಗ್ಲ ಭಾಷಾ ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು.

ಜಿಲ್ಲೆಯಲ್ಲಿ 12 ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತದೆ. ಕೃಷಿ ಪ್ರಧಾನವಾದ ಜಿಲ್ಲೆ ನಮ್ಮದು. ಸದ್ಯ 70 ಸಾವಿರ ಎಕರೆ ಪ್ರದೇಶ ನೀರಾವರಿಯಿಂದ ಕೂಡಿದೆ. ಒಂದು ಲಕ್ಷ ಎಕರೆಗೆ ನೀರು ಹರಿಸಲು ಪ್ರಯತ್ನಿಸುವೆ. ಕಾರಂಜಾ, ಮಾಂಜ್ರಾ, ಚುಳುಕಿನಾಲಾ ಹರಿಯುತ್ತದೆ. ಗೋದಾವರಿ ನೀರು ಸಮರ್ಪಕ ಬಳಕೆಗೆ ಯೋಜನೆ ರೂಪಿಸಲಾಗುವುದು. ಜಿಲ್ಲೆಯಲ್ಲಿ ಈಗಿರುವ ವ್ಯವಸ್ಥೆ ಸುಧಾರಿಸಬೇಕು. ಅದು ಇನ್ನೂ ಉನ್ನತಮಟ್ಟಕ್ಕೆ ಹೋಗಬೇಕು. ಆ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ರಹೀಂ ಖಾನ್‌ ಮಾತನಾಡಿ, ದ್ವೇಷ ಮಾಡುವುದು ಆರಂಭವಾದರೆ ಯಾವ ವ್ಯವಸ್ಥೆಯೂ ಸರಿ ಇರುವುದಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಪರಸ್ಪರ ಪ್ರೀತಿ ಇರಬೇಕು. ಅದು ನನ್ನ ಮೊದಲ ಆದ್ಯತೆ. 15 ವರ್ಷಗಳಲ್ಲಿ ಬೀದರ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆಸ್ಪತ್ರೆ, ರಸ್ತೆ, ಒಳಚರಂಡಿ, ಕುಡಿಯುವ ನೀರು, ಹಾಸ್ಟೆಲ್‌ಗಳ ಸುಧಾರಣೆ, ಎಂಜಿನಿಯರಿಂಗ್‌ ಕಾಲೇಜು, ಐಟಿಐ ಕಾಲೇಜು, ಪಾಲಿಟೆಕ್ನಿಕ್‌ ಕಾಲೇಜು, ಮಹಿಳಾ ಪದವಿ ಕಾಲೇಜು ಆರಂಭಿಸಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಎನ್ನುವುದು ನಿರಂತರವಾಗಿ ನಡೆಯುತ್ತ ಇರುತ್ತದೆ. ಜನರ ಸಲಹೆ, ಸಹಕಾರ, ಪ್ರೀತಿ ವಿಶ್ವಾಸದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು. ಜಾತಿ, ಭೇದಕ್ಕೆ ಸಮಾಜದಲ್ಲಿ ಜಾಗ ಸಿಗಬಾರದು. ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಸಾಕಷ್ಟು ಅಪಪ್ರಚಾರ ಮಾಡಿದ್ದರು. ಲಿಂಗಾಯತರ ವಿರುದ್ಧ ಎತ್ತಿ ಕಟ್ಟಿದ್ದರು. ಆದರೆ, ನಾನೆಂದೂ ಜಾತಿ, ಭೇದ ಮಾಡಿದವನಲ್ಲ. ಅದು ಜನರಿಗೆ ಚೆನ್ನಾಗಿಯೇ ಗೊತ್ತಿದೆ. ಸ್ವಾತಂತ್ರ್ಯ ನಂತರ ಬೀದರ್‌ ಕ್ಷೇತ್ರದಿಂದ ಸತತ ಎರಡೂ ಸಲ ಯಾರೂ ಗೆದ್ದಿಲ್ಲ. ಆದರೆ, ಜನ ನನ್ನನ್ನು ಸತತ ನಾಲ್ಕು ಸಲ ಗೆಲ್ಲಿಸಿದ್ದಾರೆ. ಜನಸೇವೆಯೇ ನನ್ನ ಗುರಿ ಎಂದು ಹೇಳಿದರು.

ಸಮಿತಿಯ ಕಾರ್ಯದರ್ಶಿ ಅಬ್ದುಲ್‌ ಖದೀರ್‌, ಸಂಯೋಜಕ ಜಗನ್ನಾಥ ಹೆಬ್ಬಾಳೆ, ಸದಸ್ಯ ಬಿ.ಜಿ. ಮೂಲಿಮನಿ ಅವರು ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಭವನ ನಿರ್ಮಾಣಕ್ಕೆ ಗುರಮ್ಮಾ ಸಿದ್ದಾರೆಡ್ಡಿ ಅವರು ಜಾಗ ಕೊಟ್ಟಿದ್ದಾರೆ. ಅಲ್ಲಿ ಭವನ ನಿರ್ಮಿಸಲು ಅನುದಾನ ನೀಡಬೇಕು. ಜಾನಪದ ವಸ್ತು ಸಂಗ್ರಹಾಲಯ ನಿರ್ಮಿಸಬೇಕು. ಸರ್ಕಾರದ ವಿವಿಧ ಅಕಾಡೆಮಿ, ವಿ.ವಿ.ಗಳಿಗೆ ನಮ್ಮ ಭಾಗದವರನ್ನು ನೇಮಿಸಬೇಕು. ಮಾನವ ಸೂಚ್ಯಂಕದಲ್ಲಿ ಜಿಲ್ಲೆ ಮೇಲೆ ಬರಬೇಕು. ಜನರ ತಲಾ ಆದಾಯ ಹೆಚ್ಚಾಗಬೇಕು. ‘ಹ್ಯಾಪಿನೆಸ್‌’ ಸೂಚ್ಯಂಕದಲ್ಲಿ ನಮ್ಮ ಸ್ಥಾನ ಮೇಲೆ ಬರಬೇಕು. ಬೀದರ್‌ ವಿ.ವಿ.ಗೆ ಹೆಚ್ಚಿನ ಅನುದಾನ ಕೊಡಬೇಕು. ಐಐಐಟಿ ತರಬೇಕು. ಹಲವು ದಶಕಗಳಿಂದ ಜಿಲ್ಲೆಯನ್ನು ಕಡೆಗಣಿಸುತ್ತ ಬರಲಾಗಿದೆ. ವಾಸ್ತವವಾಗಿ ಬೀದರ್‌ ಜಿಲ್ಲೆ ರಾಜ್ಯದ ಕಿರೀಟ ಆಗಬೇಕೆಂದು ಬೇಡಿಕೆಗಳ ಪಟ್ಟಿ ಇಟ್ಟರು.

ಸಮಿತಿ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಬೆಲ್ದಾಳ ಶರಣರು, ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಸರ್ದಾರ ಬಲಬೀರ್‌ ಸಿಂಗ್‌, ಬಿ.ಜಿ. ಶೆಟಕಾರ್, ಡಾ. ರಜನೀಶ ವಾಲಿ, ಡಾ. ಗುರಮ್ಮ ಸಿದ್ದಾರೆಡ್ಡಿ, ವೈಜನಾಥ ಕಮಠಾಣೆ, ಅಮೃತರಾವ ಚಿಮಕೋಡೆ, ನರಸಿಂಗರಾವ ಸೂರ್ಯವಂಶಿ, ಕೆ. ಪುಂಡಲೀಕರಾವ, ಡಾ.ಪೂರ್ಣಿಮಾ ಜಿ., ಗೀತಾ ಪಂಡಿತರಾವ ಚಿದ್ರಿ, ಶಂಕರರಾವ ಹೊನ್ನಾ, ಆನಂದ ದೇವಪ್ಪ, ಶಿವಯ್ಯ ಸ್ವಾಮಿ, ಅಶೋಕಕುಮಾರ ಹೆಬ್ಬಾಳೆ, ಶಾಂತಲಿಂಗ ಸಾವಳಗಿ, ಮಲ್ಲಿಕಾರ್ಜುನ ಸ್ವಾಮಿ, ಎಸ್.ಬಿ. ಕೂಚಬಾಳ್, ಪ್ರೊ. ಶಂಭುಲಿಂಗ ಕಾಮಣ್ಣ, ಶಿವಾನಂದ ಗುಂದಗಿ, ನಿಜಲಿಂಗಪ್ಪ ತಗಾರೆ, ಮಲ್ಲಮ್ಮ ಸಂತಾಜಿ, ಸುನೀತಾ ಕೂಡ್ಲಿಕರ್, ಮಹಾನಂದಾ ಮಡಕಿ, ಸಂಗಪ್ಪ ತವಡಿ, ಶಿವಶರಣಪ್ಪ ಗಣೇಶಪೂಪುರ, ಪ್ರಕಾಶ ಕನ್ನಾಳೆ, ಪ್ರೊ. ಎಸ್.ಬಿ. ಬಿರಾದಾರ, ಸಂಜೀವಕುಮಾರ ಜುಮ್ಮಾ, ರಾಜಕುಮಾರ ಹೆಬ್ಬಾಳೆ ಇತರರಿದ್ದರು.

ನಾನು ಬಡವನ ಮಗ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಆದರೆ, ಈಶ್ವರ ಖಂಡ್ರೆ ಅವರು ರಾಜನ ಮಗ. ಅವರ ತಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ’ ಎಂದು ರಹೀಂ ಖಾನ್‌ ಹೇಳಿದಾಗ ಇಡೀ ಸಭೆ ನಗೆಗಡಲ್ಲಲಿ ತೇಲಿತು.

‘ಜನರ ಸೇವೆ, ಶಿಕ್ಷಣ ಸಂಸ್ಥೆ ಮೂಲಕ ಗುರುತಿಸಿಕೊಂಡವನು ನಾನು. ಜನರ ಪ್ರೀತಿಯಿಂದ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದೇನೆ’ ಎಂದರು.

‘ನಾನು ದಿಢೀರ್‌ ರಾಜಕೀಯಕ್ಕೆ ಬಂದಿಲ್ಲ. ಆದರೆ, ರಾಜಕೀಯ ಕುಟುಂಬದಲ್ಲಿ ಬೆಳೆದವನು. ನಮ್ಮ ತಂದೆ ಸ್ವಾತಂತ್ರ್ಯ, ಈ ಭಾಗದ ವಿಮೋಚನೆಗೆ ಶ್ರಮಿಸಿದ್ದಾರೆ. ಕೃಷಿ, ಸಹಕಾರ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ನನ್ನ ತಂದೆಯೇ ನನಗೆ ‘ರೋಲ್‌ ಮಾಡೆಲ್‌’. ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಹಾಗೂ ನನ್ನ ತಂದೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವೆ’ ಎಂದು ಈಶ್ವರ ಬಿ. ಖಂಡ್ರೆ ತಮ್ಮ ಭಾಷಣದಲ್ಲಿ ರಹೀಂ ಖಾನ್ ಅವರ ಮಾತಿಗೆ ಪ್ರತಿಕ್ರಿಯಿಸಿ ಹೇಳಿದಂತಿತ್ತು