ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಸಿಎಂ


ಬೆಂಗಳೂರು, ಡಿ. ೨೯- ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸರ್ಕಾರದ ಆದ್ಯತಾ ಕ್ಷೇತ್ರಗಳಾಗಿದ್ದು, ಈ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.ನಗರದ ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ತರುವ ಅಪೇಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದಾರೆ. ಅವರ ಅಪೇಕ್ಷೆಯಂತೆ ರಾಜ್ಯದಲ್ಲೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳನ್ನು ತರುವ ಕೆಲಸ ನಡೆಸಿದ್ದೇವೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಪೂರಕವಾಗಿ ಸರ್ಕಾರ ಕೆಲಸ ಮಾಡಲಿದೆ ಎಂದರು.
ರಾಷ್ಟ್ರಕಂಡ ಅತ್ಯುತ್ತಮ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ಮರುನಾಮಕರಣ ಮಾಡಲಾಗಿದೆ. ಕಟ್ಟಡವೂ ಸುಂದರವಾಗಿದೆ. ಅದೇ ರೀತಿ ಇಲ್ಲಿ ಕೆಲಸ ಮಾಡುವ ವೈದ್ಯರ ಮನಸ್ಸು ಸುಂದರವಾಗಿ ಆಸೆ, ಅಪೇಕ್ಷೆ ಹಾಗೂ ಜೀವನ್ಮರಣದ ಪ್ರಶ್ನೆ ಇಟ್ಟುಕೊಂಡು ಆಸ್ಪತ್ರೆಗೆ ಬರುವವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಪುಣ್ಯದ ಕೆಲಸ ಎಂಬ ಅರಿವಿನೊಂದಿಗೆ ವೈದ್ಯರು ಕೆಲಸ ಮಾಡಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಮಾಲೀಕರು. ಸಾಮಾನ್ಯ ಜನ ಬಂದಾಗ ಅವರ ಆರೋಗ್ಯ ತಪಾಸಣೆ ಮಾಡಿ ಆಸೆ, ಅಪೇಕ್ಷೆ ಇಟ್ಟುಕೊಳ್ಳದೆ ಜನರ ಸೇವೆ ಮಾಡಿದರೆ ವೈದ್ಯಕೀಯ ಪದವಿ ಓದಿದಕ್ಕೂ ಸಾರ್ಥಕ ಆಗುತ್ತದೆ. ಇದನ್ನು ವೈದ್ಯರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಈ ನೂತನ ೧೩ ಅಂತಸ್ತಿನ ಕಟ್ಟಡದಲ್ಲಿ ೧೦ ವಿಭಾಗಗಳಿವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲವನ್ನೂ ಈ ಕಟ್ಟಡ ಒಳಗೊಂಡಿದೆ. ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೂ ಯೋಜನೆಗಳನ್ನು ರೂಪಿಸಲಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಜನರ ಸೇವೆಗೆ ಮುಂದಾಗಬೇಕು ಎಂದು ಅವರು ಮುಖ್ಯಮಂತ್ರಿ ಹೇಳಿದರು.
ರಾಜ್ಯ ಸರ್ಕಾರ ಎಂಬಿಬಿಎಂಸ್ ಓದುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದೆ. ಇದರಿಂದ ಹಳ್ಳಿಗಳಲ್ಲಿ ವೈದ್ಯರ ಕೊರತೆಯ ಸಮಸ್ಯೆ ನೀಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಜನರು ಸಹ ಕೊರೊನಾ ಹರಡುವುದನ್ನು ತಡೆಯಲು ಮಾಸ್ಕ್ ಧರಿಸಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ. ಕೆ. ಸುಧಾಕರ್, ಶಾಸಕ ರಿಜ್ವಾನ್ ಅರ್ಷದ್, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸಚ್ಚಿದಾನಂದ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧಾ ಕೇಂದ್ರದ ನಿರ್ದೇಶಕ ಡಾ. ಮನೋಜ್‌ಕುಮಾರ್ ಉಪಸ್ಥಿತರಿದ್ದರು.