ಶಿಕ್ಷಣ ಅದ್ಯತಾ ಕ್ಷೇತ್ರವಾಗಿ ಪರಿಗಣಿಸಿ ಗ್ಯಾರೆಂಟಿ ಯೋಜನೆಗೆ ಸೇರ್ಪಡಿಸಲು ಆಗ್ರಹ

ಕೋಲಾರ,ಸೆ,೧೩ರಾಜ್ಯ ಸರ್ಕಾರವು ಶಿಕ್ಷಣವನ್ನು ಆದ್ಯತಾ ಕ್ಷೇತ್ರವಾಗಿ ಪರಿಗಣಿಸಿ ಗ್ಯಾರಂಟಿ ಯೋಜನೆಗಳ ಪಟ್ಟಿಗೆ ಸೇರಿಸಬೇಕು ಎಂದು ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷೆ ಬೋಧಿಸುವ ಶಿಕ್ಷಕರಿಗೆ ಒಂದು ದಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರವು ಬಡವರು, ಮಹಿಳೆಯರು, ನಿರ್ಲಕ್ಷಿತರ ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಅದರ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಶಿಕ್ಷಣ ಕ್ಷೇತ್ರವನ್ನು ಅನಾಥ ಮಾಡಲಾಗುತ್ತಿದೆ. ಮೂಲಸೌಕರ್ಯ ಕೊರತೆಗಳಿವೆ. ಸರಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳ ಸಮಯ ಬೇಕಿದ್ದರೆ ತೆಗೆದುಕೊಳ್ಳಲಿ ಕ್ರಮಬದ್ದವಾದ ಕ್ರಿಯಾ ಯೋಜನೆ ರೂಪಿಸಿಕೊಂಡು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ನೀಡಬೇಕಾಗಿದೆ ಎಂದರು.
ರಾಜ್ಯಾದ್ಯಂತ ಶಿಕ್ಷಣ ಇಲಾಖೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೆ ಸುಮಾರು ೫೩,೭೦೦ ಹುದ್ದೆ ಖಾಲಿ ಇವೆ. ಶಿಕ್ಷಣ ಇಲಾಖೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಪರಿಹಾರ ಹುಡುಕಬೇಕು ರಾಜ್ಯದಲ್ಲಿ ಹಸಿವು ಮುಕ್ತ ಮಾಡಿದಂತೆ ಅನಕ್ಷರಸ್ಥ ಮುಕ್ತ ರಾಜ್ಯವಾಗಿ ಮಾಡಬೇಕು ಕಾಯಂ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು ಈಗಿರುವ ಅತಿಥಿ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಸರ್ಕಾರಿ ಶಾಲೆಗೆ ಮಕ್ಕಳು ಹುಡುಕಿಕೊಂಡು ಬರಬೇಕು ಯಾವುದೇ ಸರ್ಕಾರಗಳು ಕೂಡ ಇದುವರೆಗೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸಿಲ್ಲ ಕೂಡಲೇ ಸಿದ್ದರಾಮಯ್ಯ ಸರಕಾರ ಶಿಕ್ಷಣ ಕ್ಷೇತ್ರವನ್ನು ಆಧ್ಯತೆಯಾಗಿ ಪರಿಗಣಿಸಬೇಕು ಎಂದರು.
ಕನ್ನಡ ಮೇಷ್ಟ್ರ ಗಳ ಜವಾಬ್ದಾರಿ ಅದಕ್ಕಿಂತ ಅಧಿಕವಾಗಿದೆ ಆರ್ಥಿಕ ಭ್ರಷ್ಟಾಚಾರದಂತೆ ಭಾಷಿಕ ಭ್ರಷ್ಟಾಚಾರ ನಡೆಯುತ್ತಿದೆ. ಭಾಷಿಕ ಹಿಂಸೆ ನಡೆಯುತ್ತಿದೆ ಕನ್ನಡ ಭಾಷೆ ಉಳಿಸುವ ಜೊತೆಗೆ ಮನುಷ್ಯನಿಗೆ ಮೌಲ್ಯ ತಿಳಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಆ ಜವಾಬ್ದಾರಿ ಮೇಷ್ಟ್ರು ಗಳ ಮೇಲಿದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ವಿಚಾರಧಾರೆಯ ಕಾರ್ಯಕ್ರಮವನ್ನು ನಾನಾ ಕಾರಣದಿಂದ ೧೪ ತಿಂಗಳಿಂದ ಮುಂದೂಡಿಕೊಂಡು ಬಂದಿದ್ದೆವು ಬರಗೂರು ರಾಮಚಂದ್ರಪ್ಪ ಅವರು ತಮ್ಮ ವ್ಯಕ್ತಿತ್ವದ ಹಾದಿಯಲ್ಲಿ ಮತ್ತೊಬ್ಬರನ್ನು ರೂಪಿಸುತ್ತಿದ್ದಾರೆ ಅನೇಕ ಸಾಹಿತಿಗಳಿಗೆ, ಉಪನ್ಯಾಸಕ, ಅಧ್ಯಾಪಕರಿಗೆ ಬರಗೂರು ಮಾದರಿ ಆಗಿದ್ದಾರೆ. ಪ್ರತಿದಿನ ಶಿಕ್ಷಕರು ಓದಲೇಬೇಕು. ಪುಸ್ತಕ, ದಿನಪತ್ರಿಕೆ ಯಂತಹ ಚಟುವಟಿಕೆಗಳಲ್ಲಿ ಕಲಿಕೆ ಇರಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಡಿಡಿಪಿಐ ಕೃಷ್ಣಮೂರ್ತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ.ಆರ್.ಶಂಕರಪ್ಪ, ಪತ್ರಕರ್ತ ಕೆ.ಎಸ್.ಗಣೇಶ್, ಜಿಲ್ಲಾ ಕೋಶಾಧ್ಯಕ್ಷ ವಿನಯ್ ಗಂಗಾಪುರ, ಶಂಕರೇಗೌಡ, ವೆಂಕಟೇಶ್ ಮತ್ತು ತಂಡದವರು ಪ್ರಾರ್ಥಿಸಿದರು. ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ ಸ್ವಾಗತಿಸಿದರು. ಜಿಲ್ಲೆಯ ಕನ್ನಡ ಬೋಧಕರು ಇದ್ದು ಮಧ್ಯಾಹ್ನದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಣ್ಣ, ಎ.ರಾಜಾ, ಚಿಕ್ಕದೇವೇಗೌಡ ಅವರು ಕಾರ್ಯಾಗಾರ ನಡೆಸಿಕೊಟ್ಟರು.