
ಗಬ್ಬೂರು,ಏ.೦೭- ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಪಡೆದು ಜೀವನದಲ್ಲಿ ಮಾದರಿ ಪ್ರಜೆಗಳಾಗಬೇಕೆಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರಸ್ತುತ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆಧುನಿಕತೆಯ ಪರಿಚಯ ಸುಲಭವಾಗುತ್ತದೆ ಎಂದು ಬೀದರ ಜಿಲ್ಲೆಯ ಹುಲಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಾರುತಿ ಕುಮಾರ್ ನಾಯಕ ಅವರು ತಿಳಿಸಿದರು.
ಇಂದು ಡಾ. ಮಾರುತಿ ಕುಮಾರ್ ನಾಯಕ ಮಲದಕಲ್ ರವರು ತಮ್ಮ ಮಗಳಾದ ನಿಹಾರಿಕಾ ಳ ದ್ವಿತೀಯ ವರ್ಷದ ಹುಟ್ಟುಹಬ್ಬದ ನಿಮಿತ್ತ ಕ್ಯಾದಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸವಳತಾಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಕಂಪ್ಯೂಟರ್ ವಿತರಣೆ ಮಾಡುವ ಮೂಲಕ ಶಾಲಾ ಮಕ್ಕಳೊಂದಿಗೆ ತಮ್ಮ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಕ್ಯಾದಿಗೆರ ಕ್ಲಸ್ಟರ್ ವಲಯ ಅಧಿಕಾರಿಗಳಾದ ಶ್ರೀ ಅರುಣ್ ಅವರು ಮಾತನಾಡುತ್ತಾ ಡಾ.ಮಾರುತಿ ಕುಮಾರ್ ಅವರ ಶೈಕ್ಷಣಿಕ ಕಾಳಜಿ ಸಮಾಜಕ್ಕೆ ಮಾದರಿಯಾಗಿದ್ದು, ಹೀಗೆ ಪ್ರತಿಯೊಬ್ಬರು ಸೇವಾ ಮನೋಭಾವನೆಯನ್ನು ಹೊಂದಬೇಕೆಂದು ತಿಳಿಸಿದರು. ಶಾಲೆಯ ಮುಖ್ಯ ಗುರುಗಳಾದ ಕೃಷ್ಣಮೂರ್ತಿಯವರು ಮಾತನಾಡಿ ವಿದ್ಯಾರ್ಥಿಗಳು ಈ ಕಂಪ್ಯೂಟರ್ ಸದುಪಯೋಗವನ್ನು ಪಡೆದುಕೊಂಡು ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ರಾಜಾ ವೆಂಕಟೇಶ ನಾಯಕ, ಕ್ಯಾದಿಗೆರ ಕ್ಲಸ್ಟರ್ ವಲಯದ ಶಿಕ್ಷಕರಾದ ಗುರುಲಿಂಗಪ್ಪ, ರಂಗನಾಥ , ಬಸವರಾಜ್, ಶಿವರಾಜ್, ಶಿವರಾಜ್ ಚಿಂತಲಕುಂಟಾ, ಚನ್ನಬಸವ ಕವಲಿ, ಭೀಮರಾಯ ಕ್ಯಾದಿಗೆರೆ, ಶಿವರಾಜ ಕ್ಯಾದಿಗೆರೆ, ಶಾಲೆಯ ಎಸ್ .ಡಿ .ಎಂ. ಸಿ. ಯ ಸದಸ್ಯರಾದ ರೂಪೇಶ್, ಶ್ರೀನಿವಾಸ್ ಸೇರಿದಂತೆ ಗ್ರಾಮದ ಯುವಕರು ಹಾಗೂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಅಂಬರೀಶ್ ಪವಾರ್ ಅವರು ನಡೆಸಿಕೊಟ್ಟರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.