ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ

ಕೋಲಾರ,ಡಿ.೬: ಶಿಕ್ಷಕ ಸಮೂಹ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಬಗ್ಗೆ ಆಸಕ್ತಿಯನ್ನು ಮೂಡಿಸಲು ಪ್ರೇರಕರಾದರೆ ಮುಂದೆ ವಿದ್ಯಾರ್ಥಿಗಳು ಸಾಧಕರಾಗುತ್ತರೆ, ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ ಎಂದು ಪ್ರವಚನಕಾರ ತಳಗವಾರ ಆನಂದ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಯವರು ಕೈವಾರದಲ್ಲಿ ಆಯೋಜಿಸಿದ್ದ ಸಮೂದಾಯ ಜೀವನ ಶಿಬಿರದ ಉದ್ಘಾಟನೆಯನ್ನು ನೆರವೇರಿಸುತ್ತಾ ಮಾತನಾಡಿದರು.
ಸಮಾಜದೊಂದಿಗೆ ಸಹಬಾಳ್ವೆ ಮತ್ತು ಸೌಹಾರ್ದಯುತ ಜೀವನ ನಡೆಸಲು ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ನೀತಿ ಶಿಕ್ಷಣದ ಅಗತ್ಯವಿದೆ. ವಿದ್ಯೆಯು ವಿನಯ, ಸೌಜನ್ಯ, ತಾಳ್ಮೆ, ಸಾಮರಸ್ಯದ ವಿಶಾಲತೆಯನ್ನು ಬೆಳಸಬೇಕು. ಇಲ್ಲದಿದ್ದರೆ ಸ್ವಾರ್ಥಪರತೆಯ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರತಿ ತರಗತಿಯಲ್ಲಿಯೂ ನೈತಿಕ ಮೌಲ್ಯಗಳನ್ನು ಬೋಧಿಸಬೇಕು ಎಂದರು.
ನೈತಿಕ ಶಿಕ್ಷಣದ ಕೊರತೆಯಿಂದ ಇಂದು ವಿದ್ಯಾರ್ಥಿಗಳು ನಾನಾ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಾಮಮಾರ್ಗಗಳನ್ನು ಹಿಡಿಯುತ್ತಿದ್ದಾರೆ. ಶಿಕ್ಷಣದ ಬಗ್ಗೆ ಉದಾಸೀನತೆಯನ್ನು ಬೆಳಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಇಂತಹ ಮನೋಭಾವವನ್ನು ಹೋಗಲಾಡಿಸಲು ಶಿಕ್ಷಕರು ಕಾರ್ಯನಿರತರಾಗಬೇಕಾಗಿದೆ. ವಿದ್ಯಾರ್ಥಿಗಳು ರಾಷ್ಟೀಯ ಭಾವೈಕ್ಯತೆ, ಸಾಮಾಜಿಕ ಕಳಕಳಿ, ಪರಿಸರ ಪ್ರಜ್ಞೆ ಮುಂತಾದ ವಿಷಯಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ||ಶೈಂಟಿ ಆಂಟೋನಿ ಮಾತನಾಡಿ ಶಿಕ್ಷಕ ವೃತ್ತಿ ಒಂದು ನಿರಂತರ ಕಲಿಕೆಯ ತಪಸ್ಸಿನಂತೆ. ಅದು ಎಲ್ಲಿಯೂ ನಿಂತ ನೀರಾಗಬಾರದು. ಕಲಿಯುವ ಪ್ರವೃತ್ತಿಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಶಿಕ್ಷಕರು ಉತ್ತಮ ಸಂವಹನ ಕೌಶಲ್ಯವನ್ನು ಪಡೆದಾಗ ಮಾತ್ರ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಬೋಧಿಸುವುದು ಸಾಧ್ಯವಾಗುತ್ತದೆ. ಇಂತಹ ಶಿಕ್ಷಣ ಶಿಬಿರಗಳಿಂದ ಮಾನಸಿಕ ಸದೃಡತೆಯನ್ನು ಪಡೆಯಬಹುದಾಗಿದೆ ಹಾಗೂ ಉತ್ತಮ ಬೋಧನಾ ವಿಧಾನವನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ವೆಂಕಟರಮಣಾರೆಡ್ಡಿ, ಮಂಗಳ, ಎಂ.ದೇವಿಕಾ, ಪ್ರಮೀಳಾ, ವಲ್ಲೀಶ್ ಶರ್ಮ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕುಲ್ಸುಮ್ ಫಾತೀಮಾ ಕಾರ್ಯಕ್ರಮವನ್ನು ನಿರೂಪಿಸಿದರು.