ಶಿಕ್ಷಣವು ಮಾನವೀಯತೆಯ ಪ್ರಗತಿಗೆ ಪ್ರೇರಕ ಶಕ್ತಿ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.12: ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಬಹಳ ಮುಖ್ಯ. ಆ ದೇಶದ ಮಹಿಳೆಯರು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಾಗ ಮಾತ್ರ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಹೇಳಿದರು.
ಸೋಮವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಸಮಾಜದ ಪ್ರಗತಿಯ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕಾದರೆ, ಆ ಸಮಾಜದ ಮಹಿಳೆಯರ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ ಎಂದು ಡಾ. ಅಂಬೇಡ್ಕರ ಅವರು ಹೇಳಿದ ಮಾತು ನೆನೆಪಿಸಿದ ಅವರು, ಇಂದಿನ ಮಹಿಳೆಯರು ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡುವುದು ಮಾತ್ರವಲ್ಲದೆ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯಕ್ಕೆ ಹಕ್ಕುಗಳನ್ನು ನೀಡುತ್ತದೆ ಎಂದು ಹೇಳಿದರು.
ಮಹಿಳೆಯರ ಹಕ್ಕುಗಳು ಮತ್ತು ಕಾನೂನು ಹಕ್ಕುಗಳನ್ನು ರಕ್ಷಿಸಲು, 1990 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸ್ಥಾಪಿಸಲಾಯಿತು. ಭಾರತೀಯ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಮಹಿಳೆಯರಿಗೆ ಪಂಚಾಯತ್ ಮತ್ತು ಪುರಸಭೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿಯನ್ನು ಒದಗಿಸಲಾಗಿದೆ.
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ಮತ್ತು ಅವರಿಗೆ ಅಭಿವೃದ್ಧಿ ಮತ್ತು ಭದ್ರತೆಗೆ ಅವಕಾಶಗಳನ್ನು ಒದಗಿಸಲು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ಬೇಟಿ ಬಚಾವೋ ಬೇಟಿ ಪಡಾವೋ, ವರ್ಕಿಂಗ್ ವುಮೆನ್ ಹಾಸ್ಟೆಲ್, ಒನ್-ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ, ಮಹಿಳಾ ಪೆÇಲೀಸ್ ಸ್ವಯಂಸೇವಕರು, ಉಜ್ವಲಾ ಯೋಜನೆ, ಮಹಿಳಾ ಶಕ್ತಿ ಕೇಂದ್ರ ಮತ್ತು ಇತರ ಹಲವು ಯೋಜನೆಗಳ ಮೂಲಕ ಭಾರತ ಸರ್ಕಾರವು ಹೆಚ್ಚು ಅಂತರ್ಗತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಶಿಕ್ಷಣವು ಮಾನವೀಯತೆಯ ಪ್ರಗತಿಗೆ ಪ್ರೇರಕ ಶಕ್ತಿ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ರಾಷ್ಟ್ರವನ್ನು ಹೆಚ್ಚು ಶಕ್ತಿಯುತ ಮತ್ತು ಶ್ರೇಷ್ಠವನ್ನಾಗಿ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ನೀತಿ ನಿರೂಪಕರು ಅರಿತುಕೊಂಡಿದ್ದಾರೆ. ಆದ್ದರಿಂದ ಇತ್ತೀಚಿನ ದಶಕಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಧನ ಗಳಿಸಲು ಲಕ್ಷ್ಮಿ ಪೂಜೆ ಮಾಡುತ್ತೇವೆ, ವಿದ್ಯೆಗಾಗಿ ಸರಸ್ವತಿ ಹಾಗೂ ಶಕ್ತಿಗಾಗಿ ದುರ್ಗಾ ಮಾತೆಯನ್ನು ಪೂಜಿಸುತ್ತೇವೆ. ಇದರ ಅರ್ಥ ಪ್ರಾಚೀನ ಕಾಲದಿಂದಲೂ ಮಹಿಳೆಯನ್ನು ಪೂಜಿಸುತ್ತ ಬಂದಿದ್ದೇವೆ. ಮಹಿಳೆಯರು ಮನಸ್ಸು ಮಾಡಿದರೆ ಸಾಧನೆಗಳ ಉತ್ತುಂಗಕ್ಕೆ ತಲುಪಬಹುದು. ಈ ಮಹಿಳಾ ವಿಶ್ವವಿದ್ಯಾಲಯವು ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ, ಇದಕ್ಕಾಗಿ ವಿಶ್ವವಿದ್ಯಾಲಯದ ಕುಟುಂಬದ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ಪದವಿ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿನಿಯರು ದೇಶವನ್ನು ಸರ್ವೋಚ್ಚ ಎಂದು ಪರಿಗಣಿಸಿ, ದೇಶದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಮಹಿಳಾ ವಿಶ್ವವಿದ್ಯಾಲಯವು ಈ ಭಾಗದ ಮಹಿಳೆಯರಿಗೆ ಉತ್ಕøಷ್ಟವಾದ ಶಿಕ್ಷಣ ನೀಡುತ್ತಿದೆ. ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆ ಇನ್ನಷ್ಟು ಸಬಲೀಕರಣ ಹೊಂದಲು ಶಿಕ್ಷಣವೊಂದೆ ಮಾರ್ಗವಾಗಿದೆ. ರಾಜ್ಯದಲ್ಲಿಯೇ ಏಕೈಕ ಮಹಿಳಾ ವಿಶ್ವವಿದ್ಯಾಲಯ ಇದಾಗಿದ್ದು, ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಪೋಷಕರು ಸಹ ತಮ್ಮ ಮಕ್ಕಳ ಶಿಕ್ಷಣದ ಕುರಿತು ಅರಿವು ಹೊಂದಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಮಹಿಳೆ ಅತ್ಯುನ್ನತ ಸ್ಥಾನ, ಸಾಧನೆಗೈಯುತ್ತಿರುವು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣದಲ್ಲಿ ಶೇ.48ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಈ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಕುಲಪತಿ ಪ್ರೊ. ಸುಷ್ಮಾ ಯಾದವ ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಎಚ್.ಎಂ. ಚಂದ್ರಶೇಖರ, ಪ್ರೊ: ಓಂಕಾರ ಕಾಕಡೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.