ಶಿಕ್ಷಣವನ್ನು ಶ್ರೀಮಂತಗೊಳಿಸಿದವರು ಬಿ.ಟಿ ಸಾಸನೂರ್ : ನಾಗಮಾರಪಳ್ಳಿ

ಬೀದರ್:ಮಾ.4: ಬೀದರ್ ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ರಾಚಾರ್ಯರೆನಿಸಿಕೊಂಡಿದ್ದ ಬಿ.ವಿ.ಬಿ ಕಾಲೇಜಿನ ಪ್ರಾಚಾರ್ಯರಾಗಿದ್ದ ದಿ.ಬಿ.ಟಿ ಸಾಸನೂರ್ ಅವರು ಶಿಕ್ಷಣವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವರು ಎಂದು ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೆಶನ್ ಅಧ್ಯಕ್ಷರು ಹಾಗೂ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಗುರುವಾರ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಗಳು ಮತ್ತು ಕುವೆಂಪು ಕನ್ನಡ ಸಂಘಗಳ ಸಹಯೋಗದಲ್ಲಿ ಬಿ.ವಿ.ಬಿ ಕಾಲೇಜಿನ ಭವ್ಯ ಶಿಲ್ಪಿ ಲಿಂ.ಪ್ರೊ.ಬಿ.ಟಿ ಸಾಸನೂರ್ ಅವರ ಶತಮಾನೋತ್ಸವ ಹಾಗೂ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶಟ್ಟಿ ರಚಿಸಿದ ಬಿ.ಟಿ ಸಾಸನೂರ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಸನೂರ್ ಕೇವಲ ಶೈಕ್ಷಣಿಕ ಕ್ರಾಂತಿ ಮಾಡದೇ ಒಬ್ಬ ಅಡಳಿತ ಸುಧಾರಕರಾಗಿ ಮತ್ತು ರಸ್ತೆ ಅಭಿವೃದ್ಧಿಪಡಿಸಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವರು ಎಂದರು.

ಹುಬ್ಬಳ್ಳಿಯಲ್ಲಿ ಜನ್ಮ ತಾಳಿ ಬೀದರ್ ಜಿಲ್ಲೆಯನ್ನು ಕರ್ಮಭೂಮಿಯಾಗಿಸಿಕೊಂಡು ಅವರು ಮಾಡಿದ ಕಾರ್ಯ ಅಜರಾಮರ. ತನ್ನ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳನ್ನು ತೆಗೆದುಕೊಂಡು ನಗರದ ಬಸವೇಶ್ವರ ವೃತ್ತದಿಂದ ಭೂಮರೆಡ್ಡಿ ಕಾಲೇಜಿನ ವರೆಗೆ ರಸ್ತೆ ನಿರ್ಮಾಣ ಮಾಡಿ ಮಾದರಿ ಶಿಕ್ಷಕೆನಿಸಿಕೊಂಡಿರುವರು. ಇಲ್ಲಿಯ ಸಾಹಿತಿಗಳ ಆಪೆಕ್ಷೆಯಂತೆ ಬಿ.ವಿ.ಬಿ ಕಾಲೇಜಿನ ಮುಂಭಾಗದ ಇಲ್ಲಿಯ ಗುಂಪಾ ರಸ್ತೆಗೆ ಬಿ.ಟಿ ಸಾಸನೂರ್ ರಸ್ತೆ ಎಂದು ಹೆಸರಿಡಲು ಸರ್ಕಾರಕ್ಕೆ ಹಾಗೂ ಇಲ್ಲಿಯ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ನಾಗಮಾರಪಳ್ಳಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಹಿತಿ ಪಂಚಾಕ್ಷರಿ ಪುಣ್ಯಶಟ್ಟಿ ಮಾತನಾಡಿ, ಸಾಸನೂರ್ ಇಲ್ಲಿ ಸಂಬಳಕ್ಕಾಗಿ ಬರದೇ ಶಿಕ್ಷಣ ಅಭಿವೃದ್ಧಿಪಡಿಸಲು ಬಂದಿದ್ದರು. ಇತರರ ಖುಷಿಯಲ್ಲಿ ತನ್ನ ಖುಷಿ ಕಾಣುವ ಪರೋಪಕಾರಿಗಳಾಗಿದ್ದರು. ಇಲ್ಲಿಯ ತಮ್ಮ ಜೀವನ ಅಂತ್ಯವಾಗಬೆಕೆನ್ನುವ ಕನಸ್ಸು ನನಸ್ಸಾಗದಿದ್ದರೂ ಅವರ ದೇಹ ಹುಬ್ಬಳ್ಳಿಯಲ್ಲಿದ್ದರೂ ಮನಸ್ಸು ಮಾತ್ರ ಬೀದರ್‍ನಲ್ಲಿತ್ತು ಎಂಬುದಕ್ಕೆ ಅವರು ಮಾಡಿದ ಹಲವರು ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದರು.

ಬಿ.ವಿ.ಬಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ವಿಠಲರೆಡ್ಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಸನೂರ್ ಕೇವಲ ಶೈಕ್ಷಣಿಕ ಸುಧಾರಕರಾಗಿರದೇ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಮೂಲಕ ನಮ್ಮಂಥಹ ಯುವ ಪ್ರಾಚಾರ್ಯರಿಗೆ ಮಾದರಿಯಾಗಿದ್ದಾರೆ. ಅವರ ಸರಳ ವ್ಯಕ್ತಿತ್ವ, ಕರ್ತವ್ಯ ನಿಷ್ಟೆ, ಅನ್ನ ಕೊಟ್ಟ ಸಂಸ್ಥೆ ಹಾಗೂ ಊರಿಗೆ ಅವರು ತೋರಿದ ವಿಧೆಯತೆ ಇಡೀ ಮನುಕುಲಕ್ಕೆ ಹಿಡಿದ ಕೈಗನ್ನಡಿ ಎಂದು ಬಣ್ಣಿಸಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ದಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿ, ಬಿ.ಟಿ ಸಾಸನೂರ್ ಅವರು ವಿದ್ಯಾರ್ಥಿಗಳಿಗೆ ಪಾಠ ಹೇಳುವುದರ ಜೊತೆಗೆ ಬಿ.ವಿ.ಬಿ ಕಾಲೇಜಿನ ಗೋಡೆಗಳು ಕಟ್ಟುವ ಸಂದರ್ಭದಲ್ಲಿ ತಾನು ಸ್ವತಃ ಕಟ್ಟಡ ಕಾರ್ಮಿಕರಂತೆ ಕಲ್ಲು, ಇಟ್ಟಿಗೆ, ಸಿಮೆಂಟು ಕೊಡುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ಸಂದೇಶ ರವಾನಿಸಿದ್ದಾರೆ. ಇಂದಿಗೂ ಬಿ.ವಿ.ಬಿ ಕಾಲೇಜಿನ ಪ್ರತಿಯೊಂದು ಕಲ್ಲುಗಳು ‘ಸಾಸನೂರ್’, ‘ಸಾಸನೂರ್’ ಎಂದು ಕೂಗುವಂತಹ ಭಾಸವ್ಯಕ್ತವಾಗುತ್ತದೆ. ಅಂತಹ ತ್ಯಾಗಮಯ ಜೀವಿಗೆ ಇಂದು ಶತಮಾನೋತ್ಸವ ಆಚರಿಸುವ ಸೌಭಾಗ್ಯ ನಮಗೆ ಬಂದೊದಗಿರುವುದು ನಮ್ಮ ಪುಣ್ಯ ಎಂದರು. ಹಾಲಹಳ್ಳಿ ಗುಲಬರ್ಗಾ ವಿವಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಗಣಾಪೂರ ಪುಸ್ತಕ ಪರಿಚಯ ಮಾಡಿದರು.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ, ಅಖಿಲ ಭಾರತೀಯ ವೀರಶೈವ ಮಹಾಸಭೆ ಅಧ್ಯಕ್ಷ ವೈಜಿನಾಥ ಕಮಠಾಣೆ ವೇದಿಕೆಯಲ್ಲಿದ್ದರು.

ಇದೇ ವೇಳೆ ಪ್ರೊ.ಎಸ್.ಬಿ ಬಿರಾದಾರ, ಪ್ರೊ.ಸಿದ್ರಾಮ ಪನಶೆಟ್ಟಿ, ಎಂ.ಜಿ ಗಂಗನಪಳ್ಳಿ, ಪ್ರೊ.ಎಚ್.ಎಸ್ ಪಾಟೀಲ, ಡಾ.ರಘುಶಂಖ ಭಾತಂಬ್ರಾ, ಡಾ.ಚಂದ್ರಪ್ಪ ಭತಮುರ್ಗೆ, ಡಾ.ಈಶ್ವರಯ್ಯ ಕೊಡಂಬಲ; ಹಾಗೂ ಬಿ.ಕೆ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು.

ಆರಂಭದಲ್ಲಿ ಬಿ.ವಿ.ಬಿ ಕಾಲೇಜಿನ ಪ್ರಾಧ್ಯಾಪಕಿ ರೇಣುಕಾ ಮಳ್ಳಿ ಪ್ರಾಥ್ರ್ನಿಸಿದರು. ಶತಮಾನೋತ್ಸವ ಸಮಿತಿಯ ಸಂಚಾಲಕ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ, ಕರ್ನಾಟಕ ಜಾನಪದ ಪರಿಷತ್ತಿನ ತಾಲಾಕಾಧ್ಯಕ್ಷ ಎಸ್.ಬಿ ಕುಚಬಾಳ ಕಾರ್ಯಕ್ರಮ ನಿರೂಪಿಸಿ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು. ತನ್ನ ಪುಸ್ತಕದÉ ಮೂಲಕ ಸಾಸನೂರ್ ಅವರನ್ನು ನೆನಪು ಮಾಡಿದ ಪುಣ್ಯಶಟ್ಟಿ ಅವರನ್ನು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಕರ್ನಾಟಕ ಸಾಹಿತ್ಯ ಸಮಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲುಂಬಿಣಿ ಗೌತಮ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.