ಕಲಬುರಗಿ:ಸೆ.28: ನಮಗೆ ಶಿಕ್ಷಣದ ಹಸಿವಿರಬೇಕು. ಶೂನ್ಯದಿಂದ ಜೀವನ ಪ್ರಾರಂಭಿಸಿ ಸಾಧನೆಯ ಹಾದಿಯನ್ನು ತುಳಿದಿದ್ದೇವೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಡಾ. ತಳವಾರ್ ಸಾಬಣ್ಣಾ ಅವರು ಹೇಳಿದರು.
ಗುರುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ಪರಿಶಿಷ್ಟ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣವನ್ನು ಬಲಪಡಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿಯವರೆಲ್ಲರೂ ಗ್ರಾಮೀಣ ಪ್ರದೇಶದಿಂದ ಬಂದವರು. ನಮ್ಮ ಆರ್ಥಿಕ ಸ್ಥಿತಿ ಕೆಳಮಟ್ಟದಲ್ಲಿದೆ. ನಮಗೆ ಶಿಕ್ಷಣದ ಹಸಿವಿರಬೇಕು ಎಂದರು.
ಡಾ. ಅಂಬೇಡ್ಕರ್ ಅವರು ಅವಮಾನ ಎದುರಿಸಿ ಶಿಕ್ಷಣ ಪಡೆದವರು ಪುಸ್ತಕಗಳನ್ನು ಓದುವುದರ ಜೊತೆಗೆ ಬರೆದು ಅಭ್ಯಾಸ ಮಾಡಿದಾಗ ನೆನಪಿನಲ್ಲಿ ಉಳಿಯುತ್ತದೆ. ನಾನು ಯಾರಿಗಿಂತ ಕಡಿಮೆ ಇಲ್ಲ ಎಂಬ ಕೀಳರಿಮೆಯನ್ನು ಬಿಡಬೇಕು. ಗುಣಮಟ್ಟದ ಶಿಕ್ಷಣ ಪಡೆದು ಎಲ್ಲವನ್ನೂ ಸಾಧಿಸಬಹುದು. ಶಿಕ್ಷಣದಿಂದ ಜ್ಞಾನವನ್ನು ಪಡೆಯಬೇಕು. ವಿಷಯವನ್ನು ಅರ್ಥ ಮಾಡಿಕೊಂಡು ಓದಬೇಕು ಎಂದು ಅವರು ಹೇಳಿದರು.
ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು. ಜೀವನದಲ್ಲಿ ಬದಲಾವಣೆ ನಮ್ಮಿಂದ ಆಗಬೇಕು. ಅಸಾಧ್ಯವನ್ನು ಸಾಧಿಸುವ ಛಲ ವಿದ್ಯಾರ್ಥಿಗಳಿಗೆ ಬರಬೇಕು. ಸರಳತೆಯಿಂದ ಬದುಕಲು ಜೆಮ್‍ಶೆಡ್‍ಜಿ ಟಾಟಾ ಅವರ ಉದಾಹರಣೆಯನ್ನು ಅವರು ನೀಡಿದರು.
ವಸತಿ ನಿಲಯದ ಸೌಲಭ್ಯವನ್ನು ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಮೇಲ್ವಿಚಾರಕ ರವಿಕುಮಾರ್ ಅವರು ಉಪಸ್ಥಿತರಿದ್ದರು.