ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿ ಸರ್ಕಾರವೇ ವಹಿಸಲಿ

ಕಲಬುರಗಿ,ಡಿ.28-ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕೆಂಬುದು ಕರ್ನಾಟಕದ ಜನತೆಯ ಆಗ್ರಹವಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಓ) ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್.ತಿಳಿಸಿದರು.
ರಾಜ್ಯದಲ್ಲಿ ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹಿಸಿ ಎಐಡಿಎಸ್‍ಓ ನಡೆಸಿದ ಸಮೀಕ್ಷೆಯ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಇಂದು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶಿಕ್ಷಣ ನೀತಿಯ ಮೇಲೆ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು, ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕೆಂಬುದು ಕರ್ನಾಟಕದ ಜನತೆಯ ಆಗ್ರಹವಾಗಿದೆ. ನಾಲ್ಕು ವರ್ಷದ ಪದವಿಯನ್ನು ಕೈಬಿಡಬೇಕು, ನವೋದಯ ಚಳುವಳಿಯ ಚಿಂತಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರ ಕುರಿತು ಶಿಕ್ಷಣದಲ್ಲಿ ಹೆಚ್ಚು ವಿಷಯಗಳನ್ನು ಕಲಿಸಬೇಕು ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದು ಜನತೆಯ ಒಕ್ಕೊರಲಿನ ಕೂಗಾಗಿದೆ ಎಂದು ಅವರು ಹೇಳಿದರು.
ಈ ಮಾದರಿ ಸಮೀಕ್ಷೆಯ ಪೈಕಿ ಸರ್ಕಾರಿ ಶಾಲಾ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಶೇ.98.52 ರಷ್ಟು ,ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳಿಂದ ದೇಣಿಗೆ ಪಡೆಯಬಾರದೆಂದು ಶೇ.95.71 ರಷ್ಟು, ನಾಲ್ಕು ವರ್ಷದ ಪದವಿ ಅಧ್ಯಯನ ಬೇಡವೆಂದು ಶೇ.83 ರಷ್ಟು, ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲಿನಗೊಳಿಸುವುದು/ ಮುಚ್ಚುವುದು ತಪ್ಪು ಎಂದು ಶೇ.99 ರಷ್ಟು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಾಪೆರ್Çರೇಟ್ ಕಂಪನಿಗಳ ಬಳಿ ಧನಸಹಾಯ ಪಡೆಯುವುದು ತಪ್ಪು ಎಂದು ಶೇ.80 ರಷ್ಟು, ನಮ್ಮ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿದೇಶಿ ವಿವಿಗಳು ಬೇಡವೆಂದು ಶೇ.86 ರಷ್ಟು, ವಿದ್ಯಾರ್ಥಿಗಳಿಗೆ ಕೌಶಲ್ಯ/ ಉದ್ಯೋಗ ತರಬೇತಿ ನೀಡುವ ನೆಪದಲ್ಲಿ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಕಡೆಗಣಿಸಬಾರದು ಎಂದು ಶೇ.ಡ 93 ರಷ್ಟು, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಭೂತಪೂರ್ವ ಪಾತ್ರವಹಿಸಿದ ಮಹಾನ್ ಕ್ರಾಂತಿಕಾರಿಗಳು ಹಾಗೂ ಮಹಾನ್ ನವೋದಯ ಚಿಂತಕರ ಕುರಿತಾದ ಪಾಠಗಳು ಪಠ್ಯಕ್ರಮದ ಭಾಗವಾಗಬೇಕು ಎಂದು ಶೇ.97 ರಷ್ಟು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಾಗಬೇಕು ಎಂದು ಶೇ. 97 ರಷ್ಟು ರಾಜ್ಯದ ವಿದ್ಯಾರ್ಥಿಗಳು ಬಯಸಿದ್ದಾರೆ ಎಂದರು.
ಕರ್ನಾಟಕದ 9 ಸರ್ಕಾರಿ ವಿಶ್ವವಿದ್ಯಾಲಯಗಳು, 82 ಸರ್ಕಾರಿ ಪದವಿ ಕಾಲೇಜುಗಳು, 12 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 15 ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳು ಸೇರಿದಂತೆ 23,120 ಜನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹಣಮಂತ ಎಸ್.ಎಚ್.ತಿಳಿಸಿದರು.
ಎಐಡಿಎಸ್‍ಓ ಜಿಲ್ಲಾ ಅಧ್ಯಕ್ಷೆ ಸ್ನೇಹಾ ಕಟ್ಟೀಮನಿ, ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ, ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.