ಶಿಕ್ಷಣದ ಜೊತೆಗೆ ಸ್ವಾವಲಂಬನೆಯ ಬದುಕು ಕಲಿಸಿಕೊಡಿ

ಕಲಬುರಗಿ: ಮಾ.5:ಅಂಕಗಳಾಧಾರಿತ ಶಿಕ್ಷಣ ನೀಡಿದರೆ ಸಾಲದು. ಜೊತೆಗೆ ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಕರು, ಪಾಲಕ-ಪೋಷಕರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳು, ಸ್ವಾವಲಂಬನೆಯುತವಾಗಿ ಬದುಕುವ ಕಲೆಯನ್ನು ಕಲಿಸಿಕೊಡಬೇಕಾಗಿದೆ. ಪ್ರಾಥಮಿಕ ಶಿಕ್ಷಣ ಬುನಾದಿಯಾಗಿದ್ದು, ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ವಿದ್ಯಾರ್ಥಿಗಳು ಗುರು-ಹಿರಿಯರು, ಪಾಲಕ-ಪೋಷಕರ ಮಾತುಗಳನ್ನು ಆಲಿಸಿ ಮುನ್ನೆಡಿಯಿರಿ. ಟಿ.ವಿ, ಮೋಬೈಲ್ ವೀಕ್ಷಣೆಯಿಂದ ದೂರವಿದ್ದು, ಸಮಯದ ಸದುಪಯೋಗದೊಂದಿಗೆ ನಿರಂತರ ಅಧ್ಯಯನ ಮಾಡಿ ನಿಮ್ಮ ಭವಿಷ್ಯವನ್ನು ಸುಂದರವಾಗಿ ರೂಪುಗೊಳಿಸಿಕೊಳ್ಳಿ ಎಂದು ಉದ್ಯಮಿ ದತ್ತರಾಜ ಗುತ್ತೇದಾರ ಹೇಳಿದರು.

    ನಗರದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ಬಸವೇಶ್ವರ ಕಾನ್ವೆಂಟ್ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಶಾಲೆಯ 16ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಿ.ಮೂಲಗೆ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮಾತೃ ಹೃದಯಿಗಳಾಗಿದ್ದು, ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಜ್ಞಾನಾರ್ಜನೆ ಮಾಡಿಸುವುದರ ಜೊತೆಗೆ ಶರಣ ಸಂಸ್ಕøತಿಯನ್ನು ಬೆಳೆಸುತ್ತಿದ್ದಾರೆ. ಪಾಲಕ-ಪೋಷಕರು ತಮ್ಮ ಸಂಸ್ಥೆಯೆಂಬ ಭಾವನೆಯಿಂದ ನಮಗೆ ಸಹಕಾರ ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಸಾಧನೆಯನ್ನು ಮಾಡುವ ಮೂಲಕ ಸಂಸ್ಥೆಗೆ, ಪಾಲಕ-ಪೋಷಕರಿಗೆ ಕೀರ್ತಿಯನ್ನು ತರುವ ಕೆಲಸ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಬಡ, ಮಧ್ಯಮ ವರ್ಗದವರಿಗೆ ನಮ್ಮ ಸಂಸ್ಥೆ ಆಸರೆಯಾಗಿದ್ದು, ಸದುಪಯೋಗ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ.ಮರಡಿ, ಉಪನ್ಯಾಸಕ ಎಚ್.ಬಿ.ಪಾಟೀಲ, ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಪದಾಧಿಕಾರಿಗಳಾದ ಸೋಮಶೇಖರ ಎ.ಪಾಟೀಲ, ಲಿಂಗರಾಜ ಸಾಹು, ಪ್ರಮುಖರಾದ ವೆಂಕಟೇಶ, ಮಂಜುಳಾ ಕೆ., ವೈಶಾಲಿ, ಶೃತಿ ಹೂಗಾರ, ಪಾರ್ವತಿ, ರೂಪಾ, ಸೌಂದರ್ಯ, ಸುಧಾ, ನಂದಿನಿ ಬಿರಾದಾರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.