ಶಿಕ್ಷಣದ ಜೊತೆಗೆ ಸಂಸ್ಕಾರವಿದ್ದಲ್ಲಿ ಸಮಾಜದ ಅಭ್ಯುದಯ ಸಾಧ್ಯ – ಸಿದ್ಧಯ್ಯನಕೋಟೆ ಶ್ರೀ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜೂ 26 :- ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಸಂಸ್ಕಾರ ಕಲಿಸಲು ಮುಂದಾಗಬೇಕು. ಆಗ ಮಾತ್ರ ಸಮಾಜದ ಅಭ್ಯುದಯ ಸಾಧ್ಯವಿದೆ ಎಂದು ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹುಡೇಂ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಕ್ಕುಂತಿ ಬೋರೇಶ ಗುರೂಜಿಯವರ 10ನೇ ಪುಣ್ಯಸ್ಮರಣೆ ಹಾಗೂ ಗುರುಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ  ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ, ಶರಣರ ಕಾಯಕ, ದಾಸೋಹ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಸವಾದಿ ಶರಣರ ವನಗಳನ್ನು ಎಲ್ಲರೂ ಅರಿತು ನಡೆಯಬೇಕು. ಸನ್ಮಾರ್ಗದಲ್ಲಿ ನಡೆಯುವುದು ಉತ್ತಮ ಮತ್ತು ನೆಮ್ಮದಿಯ ಜೀವನಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.
ಸಾನ್ನಿಧ್ಯವಹಿಸಿದ್ದ ಗಜೇಂದ್ರಗಡ ತಳ್ಳಿಹಾಳ ಸಂಸ್ಥಾನ ಕೋಡಿಮಠದ ಪೀಠಾಧ್ಯಕ್ಷ ಡಾ.ಶರಣಬಸವ ಸ್ವಾಮೀಜಿ ಮಾತನಾಡಿ, ಹಳ್ಳಿಗಾಡಿನಲ್ಲಿ ಜಾತ್ಯತೀತ ಮನೋಭಾವದಿಂದ ಶರಣರ ಕೂಟ ಸೇರಿರುವುದು ಉತ್ತಮ ಸಂದೇಶವಾಗಿದೆ. ಸಿದ್ಧಾರೂಢರ ಅವಧೂತ ಪರಂಪರೆ, ಬಸವಾದಿ ಶರಣರ ಆಲೋಚನೆಗಳು ಸಮ ಸಮಾಜ ನಿರ್ಮಾಣದ ಧ್ಯೇಯವಾಗಿತ್ತು. ಸತ್ಯ, ಶುದ್ಧಿ ಕಾಯಕ, ದಾಸೋಹ ತತ್ವಗಳನ್ನು ಎಲ್ಲರೂ ಪಾಲಿಸಿದರೆ ಸಂಸ್ಕಾರವಂತ ಸಮಾಜವನ್ನಾಗಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಎಸ್ಸಿ ಮಹಿಳಾ ಘಟಕದ ವಿಜಯನಗರ ಜಿಲ್ಲಾಧ್ಯಕ್ಷೆ ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಅರಳಹಳ್ಳಿ ರಾಜರಾಜೇಶ್ವರಿ ಬೃಹನ್ಮಠದ ರೇವಣಸಿದ್ಧೇಶ್ವರ ತಾತ, ಕಂಪಳದೇವರಹಟ್ಟಿ (ಚಿಕ್ಕುಂತಿ) ಶಿವಮೂರ್ತಿ ಸ್ವಾಮೀಜಿ, ಯರಗುಂಡ್ಲಹಟ್ಟಿ ಪರಮಾನಂದ ಸ್ವಾಮೀಜಿ, ಭಜನಾ ಕಲಾವಿದ ಶರಣ ರಾಮಸಾಗರಹಟ್ಟಿ ಗುರುಶಂಕ್ರಪ್ಪ, ರಾಯದುರ್ಗ ರುದ್ರಮುನಿ ಸ್ವಾಮೀಜಿ, ಚಿತ್ರದುರ್ಗ ರುದ್ರಮುನಿ ಸ್ವಾಮೀಜಿ, ತುರುವನೂರು ನಿಂಗಪ್ಪ ಸ್ವಾಮಿ, ಭಜನೆ ಬೋರಪ್ಪ, ಶಿಕ್ಷಕ ಚೌಡೇಶ್, ಗಂಗಾವತಿ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ರಾಧಿಕಾ ಚೌಡೇಶ್ ಸೇರಿ ಗ್ರಾಪಂ ಸದಸ್ಯರು, ಮುಖಂಡರು ಇದ್ದರು. ಕಾರ್ಯಕ್ರಮದ ನಂತರ ಭಜನಾ ತಂಡಗಳಿಂದ ಭಜನೆ ನಡೆಯಿತು.