ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ: ನ್ಯಾಯವಾದಿ ಅಡ್ಡೋಡಗಿ

ವಿಜಯಪುರ,ಫೆ.20:ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಣ ಪಡೆಯುವುದರ ಜೊತೆಗೆ, ಮಾನವಿಯ ಮೌಲ್ಯಗಳಾದ ಸ್ನೇಹ, ಪ್ರೀತಿ, ಪರಸ್ಪರ ಹೊಂದಾಣಿಕೆ ಜೊತೆಯಲ್ಲಿಯೇ ಮೌಢ್ಯಗಳನ್ನು ಹೋಗಲಾಡಿಸುವದರ ಅರಿವು ಬೆಳೆಸಿಕೊಳ್ಳಬೇಕೆಂದು ಹಿರಿಯ ನ್ಯಾಯವಾದಿ ಬಿ.ಎಮ್. ಅಡ್ಡೋಡಗಿ (ಬಾಗೇವಾಡಿ) ಅವರು ನಗರದ ಹೊರವಲಯದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2023 – 24ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಅತಿಥಿ ನ್ಯಾಯವಾದಿ ಮಾಧವಿ ದೇಶಪಾಂಡೆ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಋಣಾತ್ಮಕ ಭಾವನೆಗಳನ್ನು ತೆಗೆದು ಹಾಕಿ ಧನಾತ್ಮಕ ಭಾವನೆಗಳನ್ನು ರೂಢಿಸಿಕೊಂಡು ಜೀವನದ ಮೂರು ಮುಖ್ಯ ಸಂಪತ್ತುಗಳಾದ ತಾಯಿಯ ಪ್ರೀತಿ, ತಂದೆಯ ತ್ಯಾಗ ಹಾಗೂ ಗುರುವಿನ ಜ್ಞಾನದ ಮಹತ್ವವನ್ನು ಅರಿತುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎನ್. ಕೆಲೂರ ಅವರು ಮಾತನಾಡಿ,. ವಿದ್ಯಾರ್ಥಿಗಳು ತಂದೆ- ತಾಯಿಯ ತ್ಯಾಗ, ಮಮತೆ, ಕಷ್ಟಗಳ ಬಗ್ಗೆ ಅರಿವು ಹೊಂದಿ ಭಾವಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕ ದಯಾನಂದ ಎನ್. ಕೆಲೂರ, ಕಾರ್ಯದರ್ಶಿ ಎನ್.ಜಿ. ಯರನಾಳ, ಮುಖ್ಯಗುರು ರಾಜಶೇಖರ ವಿ,ಎಮ್, ಶ್ರೀಶೈಲ ಹೆಗಳಾಡಿ, ಹಾಸ್ಟೇಲ್ ವಿಭಾಗದ ಮುಖ್ಯಸ್ಥ ಶ್ರೀಶಾಂತ ಹೂಗಾರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.