ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯಕ್ಕೂ ಒತ್ತು ನೀಡಿ: ಹೊರಟ್ಟಿ

ಹುಬ್ಬಳ್ಳಿ, ಜ2- ಶಿಕ್ಷಣದಷ್ಟೇ ಮಕ್ಕಳ ಆರೋಗ್ಯವೂ ಮುಖ್ಯವಾಗಿದ್ದು, ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ತಮ್ಮ ಸ್ವಂತ ಮಕ್ಕಳಂತೆ ಆರೈಕೆ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಶಿಕ್ಷಣ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭ ಹಿನ್ನೆಲೆಯಲ್ಲಿ ಇಲ್ಲಿನ ಪೆಂಡಾರ ಗಲ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.2ರಲ್ಲಿ ಆಯೋಜಿಸಿದ್ದ ಹೊಸ ವರ್ಷದ ವಿದ್ಯಾಗಮ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಕೊರೋನಾ ಮಹಾಮಾರಿಯಿಂದ ವಿಶ್ವವೇ ಪರಿತಪಿಸಿದೆ. ಕಳೆದ 9 ತಿಂಗಳಿನಿಂದ ಶಾಲಾ- ಕಾಲೇಜುಗಳು ತೆರೆಯದ ಹಿನ್ನೆಲೆಯಲ್ಲಿ ಸರಿಯಾದ ವಿದ್ಯಾಭ್ಯಾಸವಿಲ್ಲದೇ ಮಕ್ಕಳ ತಲೆಗಳು ಹಾಳಾದಂತಾಗಿವೆ. ಮೌಲ್ಯಯುತ ಶಿಕ್ಷಣ ಜೊತೆಗೆ ಆರೋಗ್ಯ ಕಾಳಜಿ ಮೂಲಕ ಅವೆಲ್ಲವನ್ನೂ ಸರಿಪಡಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
ಶಾಲಾವರಣದ ಹೊರಗೆ ನಡೆಯುತ್ತಿದ್ದ ಹಿಂದಿನ ವಿದ್ಯಾಗಮದಿಂದ 72 ಶಿಕ್ಷಕರು ಕೊರೋನಾದಿಂದ ಅಸುನೀಗಿದ್ದಾರೆ. ಪ್ರಸ್ತುತ ಶಾಲಾವರಣದಲ್ಲೇ ವಿದ್ಯಾಗಮ ಆರಂಭವಾಗಿದ್ದು, ಶಿಕ್ಷಕರು ವೈಯಕ್ತಿಕ ಆರೋಗ್ಯ ಕಾಳಜಿ ಜೊತೆಗೆ ಮಕ್ಕಳ ಆರೋಗ್ಯಕ್ಕೂ ಒತ್ತು ನೀಡಿ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಬಡ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಕ್ಷೇತ್ರದ ಕೆಲ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಬಂದ್ ಮಾಡಲಾಗಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂಥ ವಾತಾವರಣ ಸರ್ಕಾರಿ ಶಾಲೆಗಳಲ್ಲೂ ಸೃಷ್ಠಿಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ರಾಜ್ಯದ ಶೈಕ್ಷಣಿಕ ಕ್ರಾಂತಿಯಲ್ಲಿ ವಿಧಾನಪರಿಷತ್ ಸದಸ್ಯರೂ, ಮಾಜಿ ಶಿಕ್ಷಣ ಸಚಿವರೂ ಆದ ಬಸವರಾಜ ಹೊರಟ್ಟಿ ಅವರ ಪಾತ್ರ ಅಪಾರವಾಗಿದ್ದು, ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಕೆಲವೊಮ್ಮೆ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹೊರಟ್ಟಿ ಅವರ ಸಲಹೆ, ಮಾರ್ಗದರ್ಶನ ಪಡೆಯುತ್ತಿರುವುದೇ ಸಾಕ್ಷಿಯಾಗಿದೆ ಎಂದ ಶಾಸಕರು, ಸರ್ಕಾರಿ ಶಾಲೆಗಳ ಇನ್ನಷ್ಟು ಅಭಿವೃದ್ಧಿಗಾಗಿ ಪ್ರತಿ 6 ತಿಂಗಳಿಗೊಮ್ಮೆ ಪೋಷಕರ ಸಭೆ ಆಯೋಜಿಸುವಂತೆ ಬಿಇಒ ಅವರಿಗೆ ಸೂಚಿಸಿದರು.
ಬಿಇಒ ಶ್ರೀಶೈಲ ಕರಿಕಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಸ್. ಶಿವಳ್ಳಿಮಠ, ಮುಖ್ಯ ಶಿಕ್ಷಕರಾದ ದೀಪಾ ಹಿರೇಗೌಡ್ರ, ಜಿ.ಬಿ. ಹೊಸಮನಿ, ಎಸ್.ಡಿ.ಎಂ.ಸಿ ಸದಸ್ಯರಾದ ಲಕ್ಷ್ಮಣಸಾ ಖೋಡೆ, ಹನುಮಂತಸಾ ಖೋಡೆ, ಶ್ವೇತಾ ಕೋಡೆ, ಗಂಗಪ್ಪ ಅಂಗಡಿ, ಶಿಕ್ಷಕರಾದ ವಿಎಚ್. ದುಮ್ಮೇರ, ಎಂ.ಎಸ್. ಮುದುಕನಗೌಡ್ರ, ಮುಖಂಡರಾದ ಯಲ್ಲಪ್ಪ ಮೆಹರವಾಡೆ, ಬಸವರಾಜ ಮೆಣಸಗಿ, ಶ್ರೀನಿವಾಸ ಬೆಳದಡಿ, ಇತರರು ಇದ್ದರು.
ಇದಕ್ಕೂ ಮುನ್ನ ಉಭಯ ಶಾಸಕರು ಶಾಲಾರಂಭದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.