ಶಿಕ್ಷಣದ ಜೊತೆಗೆ ಕೌಶಲ್ಯ ಗುಣ ಅಳವಡಿಸಿಕೊಳ್ಳಿ

ರಾಯಚೂರು,ಮಾ.೧೧- ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ದಯಾನಂದ ಎಂ ಬೇಲೂರೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸೇಠ್ ಚುನಿಲಾಲ್ ಅಮರಚಂದ ಬೊಹರಾ (ಎಸ್ ಸಿಎಬಿ) ಕಾನೂನು ಮಹಾವಿದ್ಯಾಲಯದ ವತಿಯಿಂದ ತಾಲ್ಲೂಕಿನ ಗೌಸ ನಗರ ಹಾಗೂ ಬಾಯಿದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ
ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿಂದಲೇ ಪ್ರೀತಿ, ಪ್ರೇಮ ಎಂದು ಮನೆ ಬಿಟ್ಟು ಓಡಿ ಹೋಗುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿದ್ದು ಕಳವಳಕಾರಿ ಸಂಗತಿ.ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಉತ್ತಮ ಅಂಕಗಳು ಗಳಿಸಿದರೆ ಉದ್ಯೋಗ ಸಿಗಲಿದೆ. ಶಿಕ್ಷಣದ ಜೊತೆಗೆ ಕೌಶಲ್ಯ(ಸ್ಕಿಲ್ ಡೌಲಪ್ ಮೆಂಟ್) ಗುಣ ಪಡೆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ದೊರೆಯಬಹುದು. ತಂದೆತಾಯಿ,ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಎಸ್ ಸಿ ಎಬಿ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವೈ.ಶ್ರೀಕಾಂತ ರಾವ್ ಮಾತನಾಡಿ, ಮಕ್ಕಳು ಪಠ್ಯದ ಜೊತೆಗೆ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ.
ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು.ಗ್ರಾಮೀಣ ಭಾಗದಲ್ಲಿ ಕಾನೂನು ಜ್ಞಾನ ಬೆಳೆಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶಾಲೆಗಳಲ್ಲಿ ಕಾನೂನು ಅರಿವು ಮಾಡಿಸುತ್ತಿದ್ದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಶಿವಕುಮಾರ ಮ್ಯಾಗಳಮನಿ ಕಾನೂನಿನ ಕುರಿತು ಮಾತನಾಡಿದರು. ಈ ವೇಳೆ ಬಾಯಿದೊಡ್ಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಸವರಾಜ,ವೈಜನಾಥ, ಎಸ್ ಡಿಎಂಸಿ ಅಧ್ಯಕ್ಷ ಗೋವಿಂದರೆಡ್ಡಿ, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
ವಿದ್ಯಾರ್ಥಿ ಪಾರ್ವತಿ ಪ್ರಾರ್ಥಿಸಿದರು. ಎಸ್ ಸಿಎ ಬಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಾರಾಯಣ ಸ್ವಾಮಿ ಜಿ. ಸ್ವಾಗತಿಸಿದರು.ಎಸ್ ಪಿ ಮಹೇಂದ್ರ ಸಿಂಹ ನಿರೂಪಿಸಿದರು. ಎಸ್ ಸಿಎ ಬಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪದ್ಮಾ ಜೆ ವಂದಿಸಿದರು.