ಶಿಕ್ಷಣದ ಜತೆಗೆ ಕೌಶಲ್ಯವೂ ಮುಖ್ಯ

ತುಮಕೂರು, ಆ. ೧೨- ಶಿಕ್ಷಣದ ಜತೆಗೆ ಜೀವನ ಕೌಶಲ್ಯವೂ ಮುಖ್ಯ. ಹಸಿವಿನ ಅರಿವಿದ್ದವನು ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಾನೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಹೆಚ್.ಎನ್. ನಾಗಮೋಹನದಾಸ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸಂಕಲ್ಪ-೨೦೨೩ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಅಂತರಾಳದ ಕೌಶಲ್ಯವನ್ನು ಬೆಳೆಸುವಂತಹ ಕಾರ್ಯ ಶಿಕ್ಷಣ ಸಂಸ್ಥೆಗಳು ಕೈಗೊಳ್ಳಬೇಕು. ಎಲ್ಲರಿಗೂ ಸಮಾನ ಮತ್ತು ಉನ್ನತ ಶಿಕ್ಷಣ ದೊರೆಯಬೇಕು. ಎಲ್ಲರಲ್ಲೂ ಅನೇಕ ಕೌಶಲ್ಯಗಳು ಅಡಗಿರುತ್ತವೆ. ಮೇಲು-ಕೀಳು, ಬಡವ-ಶ್ರೀಮಂತ ಎನ್ನದೆ ಅವರ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು ಎಂದರು.
ಪ್ರಸ್ತುತ ಶಿಕ್ಷಣ ಕ್ಷೇತ್ರ ತಂತ್ರಜ್ಞಾನದ ಅಳವಡಿಕೆಯಲ್ಲಿ ಹಲವು ಹೊಸತ ಕಾಣುತ್ತಿದೆ.ವಿದ್ಯಾವಂತರು ನಾಡಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುನ್ನೆಲೆಗೆ ತಂದು ಮಣ್ಣಿನ ಇತಿಹಾಸವನ್ನು ಉಳಿಸಬೇಕು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ..ಬಿ. ಕರಿಯಣ್ಣ ಮಾತನಾಡಿ, ಶಿಸ್ತು ಬದ್ಧತೆಯಿಂದ ವಿದ್ಯಾರ್ಥಿಗಳು ಈ ಸಂಭ್ರಮ ಆಯೋಜಿಸಿದ್ದಾರೆ. ಅದ್ದೂರಿಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಶಿಕ್ಷಣದ ಜತೆಗೆ ಇಂತಹ ಹಲವಾರು ಚಟುವಟಿಕೆಗಳಿಂದ ಉತ್ತಮ ಕೌಶಲ್ಯಗಳನ್ನು ಹೊಂದಬಹುದು. ಇದರ ಜತೆಗೆ ಸಮಾಜದ ಜವಾಬ್ದಾರಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ತಿಳಿದುಕೊಂಡು ಮುಂದೆ ಸಾಗಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಿ. ಶೋಭಾ ಮಾತನಾಡಿ, ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಶ್ರಮ, ಜವಾಬ್ದಾರಿ, ಕಾರ್ಯನಿರ್ವಹಣೆ, ಎಲ್ಲವೂ ಸೇರಿ ಈ ಸಂಕಲ್ಪ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಶಿಕ್ಷಣದ ಜತೆಗೆ ಇಂತಹ ಸಂಭ್ರಮ, ಆಚರಣೆಗಳು ವಿದ್ಯಾರ್ಥಿಗಳಿಗೆ ದೊರೆತಾಗ ಅವರಲ್ಲಿ ಹೊಸ ಚೈತನ್ಯ ಮೂಡುತ್ತದೆ. ಒಂದು ಉತ್ತಮ ಜೀವನದ ಪಾಠವನ್ನು ಇಂತಹ ಸಂಭ್ರಮ ಚಟುವಟಿಕೆಗಳು ತಿಳಿಸಿಕೊಡುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಾರ್ಷಿಕ ಸಂಚಿಕೆ ‘ಸಂಕಲ್ಪ-೨೦೨೩’ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್. ಸಿ. ನಾಗರಾಜು, ಡಾ. ವನಜಾಕ್ಷಿ ವಿ., ಡಾ. ಸಲ್ಮಾ ಬಾನು, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಭಾನುನಂದನ್ ಬಿ.ಸಿ. ಮತ್ತಿತರರು ಭಾಗವಹಿಸಿದ್ದರು.