ಶಿಕ್ಷಣದ ಜತೆಗೆ ಕೌಶಲ್ಯತೆಯೂ ಮುಖ್ಯ: ಸಚಿವ

ಚಿತ್ರದುರ್ಗ,ಸೆ.19; ಸಮಾಜದಲ್ಲಿ ಸಬಲೀಕರಣ, ಪ್ರಗತಿ, ಸುಧಾರಣೆ ಕಾಣಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಕೌಶಲ್ಯತೆಗೂ ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ನಗರದ ಕುಂಚಿಗನಾಳ್ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ವನ್ನು  ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯತೆ ಮತ್ತು ಶಿಕ್ಷಣ ಎರಡು ಜೊತೆಯಲ್ಲಿಯೇ ಪಡೆಯಬೇಕು. ಶಿಕ್ಷಣ, ಕೌಶಲ್ಯ ಪಡೆದು ನಮ್ಮ ಜೀವನದ ಭವಿಷ್ಯ ರೂಪಿಸಿಕೊಳ್ಳುವ ಜೊತೆಜೊತೆಯಲ್ಲಿಯೇ ಸಮಾಜದ ಭವಿಷ್ಯವನ್ನು ನಮ್ಮ ವೃತ್ತಿ, ಜ್ಞಾನ, ಕೌಶಲ್ಯದ ಮೂಲಕ ಸಮಾಜಕ್ಕೆ, ಕುಟುಂಬಕ್ಕೆ ಆರ್ಥಿಕ ಶಕ್ತಿ ಕೊಡಲು ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಕೌಶಲ್ಯ ಎಲ್ಲ ಕ್ಷೇತ್ರಕ್ಕೂ ಅನ್ವಯವಾಗಲಿದೆ ಎಂದರು.
 ಯುವಕರಿಗೆ ಬೇಕಾಗಿರುವ ಕೌಶಲ್ಯ ಎಲ್ಲ ಕಡೆ ಕೊಡಲಾಗುತ್ತಿದೆ. ಆದರೆ ಮಾಹಿತಿ ಕೊರತೆಯಿಂದ ಉತ್ತಮವಾಗಿ ಅವಕಾಶಗಳ ಬಳಕೆಯಾಗುತ್ತಿಲ್ಲ.ಇದನ್ನು ಬಗೆಹರಿಸಲು ಟೆಕ್ನಿಕಲ್ ಪ್ಲಾಟ್ ಫಾರಂ ನಿರ್ಮಾಣ ಮಾಡಲಾಗಿದೆ. ಈ ಪ್ಲಾಟ್ ಫಾರಂ ಮೂಲಕ ಸ್ಕಿಲ್ ಕನೆಕ್ಟ್ ಮೂಲಕ ನಾಡಿನ ಯುವಕರಿಗೆ ಕೌಶಲ್ಯತೆ, ಉದ್ಯೋಗ, ಸಬಲೀಕರಣ, ಸಹಕಾರ, ಶಿಕ್ಷಣ ಪಡೆದುಕೊಳ್ಳಲು ಈ ಪ್ಲಾಟ್ ಫಾರಂಗೆ ನೋಂದಾಯಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಬಯಸಿದನ್ನೂ ಸರ್ಕಾರದ ವತಿಯಿಂದ ಉಚಿತವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಕೊಡಿಸಲು ಉದ್ಯೋಗ ಹಾಗೂ ಬೇಡಿಕೆ ಆಧಾರಿತವಾಗಿ ಯುವಕರಿಗೆ ತರಬೇತಿ ಕೊಡಲಾಗುತ್ತಿದೆ ಎಂದರು.