ಶಿಕ್ಷಣದೊಂದಿಗೆ ಕಲೆ ಪ್ರೋತ್ಸಾಹಿಸಿ

ಬಾಗಲಕೋಟೆ: ಜ. 2 : ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಇದೇ ಪ್ರಥಮ ಬಾರಿಗೆ ಸರಕಾರಿ ಕಾರ್ಯಕ್ರಮವಾಗಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಕರಣಾ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್ ಸೇರಿದಂತೆ ಇತರೆ ಅಧಿಕಾರಿಗಳು ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ ಅವರು ಅಮರ ಶಿಲ್ಪಿ ಜಕಣಾಚಾರಿ ಅವರು ಹಲವಾರು ದೇವರ ಮೂರ್ತಿಗಳ ಕೆತ್ತನೆ ಮಾಡಿದ್ದಾರೆ. ಇಂತಹ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರದಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಲ್ಪ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಶಿಲ್ಪ ಕಲೆಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಲಕ್ಷಾಂತರ ಹಣ ವ್ಯಯಮಾಡಿ ಕೊಂಡುಕೊಳ್ಳುತ್ತಿದ್ದಾರೆ. ಇಂತಹ ಕಲೆ ಉಳಿಸಿ ಬೆಳಿಸಿದಾಗ ಮಾತ್ರ ಜಕಣಾಚಾರಿ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುರನಾಳ ಮಠದ ಮುರುಘರಾಜೇಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಹೇಮಾವತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿಶ್ವಕರ್ಮ ಸಮಾಜದ ಜಿಲ್ಲಾದ್ಯಕ್ಷ ಸಂಗಮೇಶ ಹಡಗಲಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸುಗತೇಕರ ಗೋಂದಲಗೇರಿ ಕಲಾ ತಂಡದಿಂದ ಜಕಣಾಚಾರಿ ಅವರ ಕುರಿತು ಜಾನಪದ ಹಾಡಿದರೆ, ಅನುಷಾ ಪತ್ತಾರ ವಿಶ್ವಕರ್ಮ ಸಮಾಜದ ಕುರಿತು ಹಾಡಿದರು. ಅಲ್ಲದೇ ಜಕಣಾಚಾರಿ ಅವರ ಶಿಲ್ಪ ಕೆತ್ತನೆಗಳ ಪರಿಚಯವನ್ನು ಪಿಪಿಟಿ ಮೂಲಕ ಮಾಡಿಕೊಡಲಾಯಿತು. ಗದಗಿನ ತ್ರಿಕುಟೇಶ್ವರ ದೇವಸ್ಥಾನದಲ್ಲಿನ ಕದಂಬ ಶಿಲ್ಪಕಲೆ, ಚನ್ನಕೇಶವ ದೇವಾಲಯದಲ್ಲಿನ ಕೃಷ್ಣಲೀಲೆ, ವೀರನಾರಾಯಣ ದೇವರ ಕೆತ್ತನೆ, ಬೆಲೂರಿನ ಕಪ್ಪೆ ಚನ್ನಿಗರಾಯಣ ಮೂರ್ತಿ, ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನ ಕೆತ್ತನೆಗಳನ್ನು ಚಿತ್ರಗಳನ್ನು ಪ್ರದರ್ಶಿಸಲಾಯಿತು.