ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ : ಪಾಟೀಲ

ಕಾಳಗಿ ;ಮೇ.26: ಶಿಕ್ಷಣದಿಂದ ಮಾತ್ರ ಸಮಾಜ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ವಿಶ್ವನಾಥ ಪಾಟಲ್ ಹೆಬ್ಬಾಳ ಹೇಳಿದರು.
ಪಟ್ಟಣದ ಶ್ರೀ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ ವತಿಯಂದ ಬಸವ ಭೀಮಯಾನ ಅಂಗವಾಗಿ ಹಮ್ಮಿಕೊಂಡ ಗರಿಷ್ಠಾಂಕ ಮಲ್ಲ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಶೈಕ್ಷಣಿಕವಾಗಿ ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಕಂರಿಸಬೇಕು. ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಪಕ ಡಾ. ಶ್ರೀಮಂತ ಹೋಳಕರ್ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ ರವರು ಕೇವಲ ಭಾರತ ರತ್ನ ಅಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ವಿಶ್ವರತ್ನರಾಗಿದ್ದಾರೆ, ಅಂಬೇಡ್ಕರ ರವರ ತತ್ವಾದರ್ಶಗಳು ಸರ್ವಕಾಲಿಕವಾಗಿವೆ ಎಂದು ಹೇಳಿದರು.
ಕಾಳಗಿ ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಪಕ ಡಾ.ಗುರುಪ್ರಸಾದ ಹೂಗಾರ ಮಾತನಾಡಿ, ಸಾಂಸ್ಕøತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರು ಸ್ಥಾಪಿಸಿದ್ದ ಅನುಭವ ಮಂಟಪ ಜಗತ್ತಿನ ಮೊಟ್ಟ ಮೊದಲ ಸಂಸತ್ ಆಗಿದೆ, ಅಸಮಾನತೆಯಲ್ಲಿ ತೊಳಲಾಡುತ್ತಿದ್ದ ಸಮಾಜದಲ್ಲಿ ಸಮಾನತೆಯನ್ನು ಸಾರಿದ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ ಎಂದು ಹೇಳಿದರು.
2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಗರಿಷ್ಠಾಂಕ ಮಲ್ಲ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರಟಕಲ್ ಹಿರೇಮಠದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿದರು. ಯುವ ನಾಯಕ ರಾಜಕುಮಾರ ರಾಜಾಪೂರ, ಅವಿನಾಶ ಮೂಲಿಮನಿ ಮಾತನಾಡಿದರು. ಯುವ ಮುಖಂಡ ನೀಲಕಂಠ ಗುತ್ತೇದಾರ, ಮಾಜಿ ತಾ.ಪಂ ಸದಸ್ಯ ಸುಭಾಷ ಕದಂ, ಉದ್ಯಮಿ ವಿಶ್ವನಾಥ ವನಮಾಲಿ, ಶೇಖರ ಪಾಟೀಲ್, ನಾಗಪ್ಪ ಬೀದಿಮನಿ, ಜನಪದ ಕಲಾವಿದ ರಾಜು ತಮ್ಮಾಣಿ, ಶಿವರುದ್ರಯ್ಯ ಸಾಲಿಮಠ, ಯಲ್ಲಾಲಿಂಗ ಪಾಟೀಲ್, ರಾಜೇಂದ್ರಬಾಬು ಹೀರಾಪೂರ, ಸುಧಾರಾಣಿ ಚಿದ್ರಿ ಇತರರು ಇದ್ದರು.
ಸತೀಶ್ಚಂದ್ರ ಸುಲೇಪೇಟ ಸ್ವಾಗತಿಸಿದರು. ಕಸಾಪ ಕಾಳಗಿ ತಾಲೂಕಾಧ್ಯಕ್ಷ ಸಂತೋಷ ಕುಡ್ಡಳ್ಳಿ ಪ್ರಾಸ್ತಾವಿಕ ಮಾನಾಡಿದರು. ಶಿಕ್ಷಕ ಬಾಬರ್ ಪಟೇಲ್ ನಿರೂಪಿಸಿ ವಂದಿಸಿದರು.