ಶಿಕ್ಷಣದಿಂದ ಸಮಾನತೆ ಸಾಧ್ಯ

ಗುಳೇದಗುಡ್ಡ ಸೆ. 12: ಕರ್ನಾಟಕ ಬಹುಜನ ಚಳುವಳಿ ಸಂಘದ ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಅವರು ಶಿಕ್ಷಕರ ದಿನದ ಅಂಗವಾಗಿ ಪಟ್ಟಣದ ರಾಷ್ಟ್ರಪ್ರಶಸ್ತಿ ಪುರಸ್ಕøತ, ನಿವೃತ್ತ ಶಿಕ್ಷಕಿ ಡಾ.ಶಾಂತಾ ಕರಡಿಗುಡ್ಡ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಬಹುಜನ ಚಳುವಳಿ ಸಂಘದ ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಮಾತನಾಡಿ, ಪಟ್ಟಣದ ಬಾಶೆಲ್‍ಮಿಶನ್ ಶಾಲೆಯ ನಿವೃತ್ತ ಗುರುಮಾತೆ ಡಾ. ಶಾಂತಾ ಕರಡಿಗುಡ್ಡ ಅವರು, ಮಕ್ಕಳ ಶಿಕ್ಷಣಕ್ಕಾಗಿ ಅಪಾರವಾಗಿ ಶ್ರಮಿಸಿದವರು. ಜೊತೆಗೆ ತಮ್ಮ ವೈಯಕ್ತಿಕವಾಗಿ ಬಡಮಕ್ಕಳಿಗೆ ಸ್ವತಃ ಶಾಲಾ ಶುಲ್ಕ ವೆಚ್ಚವನ್ನು ಸಹ ಭರಿಸಿದ್ದಾರೆ. ಇಂತಹ ಅಪರೂಪದ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹಿರಿಯಪ್ಪ ಮಾದರ ಹೇಳಿದರು.
ಡಾ.ಶಾಂತಾ ಕರಡಿಗುಡ್ಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯನ ವಿಶಾಲವಾದ ಭಾವನಾತ್ಮಕ ಬೆಳವಣಿಗೆಗೆ ಶಿಕ್ಷಣ ಅವಶ್ಯ. ಪ್ರತಿಯೊಬ್ಬರಿಗೂ ಆತ್ಮಗೌರವ, ಸ್ವಾಭಿಮಾನ ಬಹಳ ಮುಖ್ಯ. ಸಾರ್ವಜನಿಕ ವಲಯದಲ್ಲಿ ಎಲ್ಲರೂ ಮನುಷ್ಯತ್ವ ಕಾಣುವ ಭಾವನೆಯನ್ನು ತಾಳಬೇಕು. ಸಮಾಜದಲ್ಲಿ ಸಮಾನತೆ ಬರಬೇಕು. ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಕಾಯಾ, ವಾಚಾ, ಮನಸಾದಿಂದ ಮಕ್ಕಳಿಗೆ ಶಿಕ್ಷಣ ನೀಡಿದರೆ ಅದೇ ನಾವು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಕೊಡುವ ಗೌರವ ಎಂದರು. ಈ ಸಂದರ್ಭದಲ್ಲಿ ಡ್ಯಾನಿಯಲ್ ಕರಡಿಗುಡ್ಡ, ಪತ್ರಕರ್ತ ಮಹೇಶ ಶೇಬಿನಕಟ್ಟಿ, ಕರ್ನಾಟಕ ಬಹುಜನ ಚಳುವಳಿ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರಿದ್ದರು.