ಶಿಕ್ಷಣದಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ

ಕಲಬುರಗಿ: ಜ.24:ಶಿಕ್ಷಣವು ಮಾನವನಲ್ಲಿ ಅಡಗಿರುವ ಅಜ್ಞಾನವನ್ನು ದೂರಮಾಡಿ, ಅವನಿಗೆ ಅಮೂಲ್ಯವಾದ ಜ್ಞಾನವನ್ನು ನೀಡಿ ರಾಷ್ಟ್ರದ ಸದೃಢ ಮಾನವ ಸಂಪನ್ಮೂಲ ನಿರ್ಮಾಣ ಮಾಡುತ್ತದೆ. ಶಿಕ್ಷಣದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ, ಶ್ರಮಬಲದ ಉತ್ಪಾದಕತೆ, ಬದುಕುವ ವಿಧಾನ, ಸಂಶೋಧನೆ ಮತ್ತು ಆವಿಷ್ಕಾರಗಳು ಜರುಗುವ ಮೂಲಕ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಅಂತಾರಾಷ್ಟ್ರೀಯ ಶಿಕ್ಷಣ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣವು ಮಾನವಾಭಿವೃದ್ಧಿಯ ಒಂದು ಪ್ರಮುಖ ಅಂಗ. ಮಾನವಾಭಿವೃದ್ದಿಯ, ಆರ್ಥಿಕಾಭಿವೃದ್ಧಿಗೂ ಅತ್ಯಂತ ನಿಕಟವಾದ ಸಂಬಂಧವಿದೆ. ಆದ್ದರಿಂದಲೇ ಇಂದು ಭಾರತ ಶಿಕ್ಷಣ ಅಭಿವೃದ್ದಿಗೆ ಅನೇಕ ವಿಧಾನಗಳಲ್ಲಿ ಪ್ರಯತ್ನಿಸುತ್ತಿದೆ. ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಒಂದು ಪ್ರಮುಖ ಸಾಧನವಾಗಿದೆ. ಇದು ಶ್ರಮ ಬಲದ ಉತ್ಪಾದಕತೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜನರಿಗೆ ಬದುಕುವ ದಾರಿ ಹಾಗೂ ವಿಧಾನವನ್ನು ಶಿಕ್ಷಣವು ಕಲಿಸಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಸಹ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಶಿಕ್ಷಕ ಸೈಯದ್ ಹಮೀದ್, ಸಿಬ್ಬಂದಿ ಸೋಹೆಲ್ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.