ಶಿಕ್ಷಣದಿಂದ ಮಾತ್ರ ಉತ್ತಮ ಜೀವನ ಸಾಧ್ಯ

ಪಿರಿಯಾಪಟ್ಟಣ:ಮಾ:31: ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಆರ್‍ಬಿಐ ಬ್ಯಾಂಕ್‍ನ ಸಿಎಸ್‍ಆರ್ ಯೋಜನೆಯಡಿ ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಿಎಸ್ ಆರ್ ನಿಧಿಯನ್ನು ತೋರಿಕೆಯ ಮಾತ್ರಕ್ಕೆ ಖರ್ಚು ಮಾಡುವ ಹಲವು ಕಂಪನಿಗಳ ನಡುವೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಯೋಜನೆಗೆ ಆರ್ ಬಿಐ ನ ಸಿಎಸ್ ಆರ್ ನಿಧಿ ವಿನಿಯೋಗವಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನಾನು ವಿದ್ಯಾರ್ಥಿಯಾಗಿದ್ದಾಗ ಮನೆಯಿಂದ ಹಾಲನ್ನು ತೆಗೆದುಕೊಂಡು ಹೋಗಿ ಮನೆಗಳಿಗೆ ವಿತರಿಸಿ ಬಳಿಕ ಬಸ್ ನಲ್ಲಿ ಶಾಲೆಗೆ ತೆರಳಿ ವ್ಯಾಸಂಗ ಮಾಡುತ್ತಿದ್ದೆ, ಜೊತೆಗೆ ಶನಿವಾರ ಮತ್ತು ಭಾನುವಾರ ದನಗಳನ್ನು ಮೇಯಿಸುವ ಸರದಿ ನನಗೆ ಕಾಯಂ ಆಗಿತ್ತು ಎಂದರು. ಇಂತಹ ಪರಿಸ್ಥಿತಿಯಲ್ಲೂ ಉತ್ತಮ ಶಿಕ್ಷಣ ಪಡೆದು ಸಂಸದನಾಗಿರುವುದಕ್ಕೆ ನಾನು ಒಬ್ಬ ಸಾಕ್ಷಿಯಾಗಿದ್ದೇನೆ ಎಂದರು.
ಪತ್ರಕರ್ತ ಎಚ್.ಆರ್.ರಂಗನಾಥ ನೋಡಲು ಒಬ್ಬ ಒರಟು ವ್ಯಕ್ತಿಯಾಗಿ ಕಾಣುತ್ತಿದ್ದರೂ ರಾಜೇಶ್ ಮತ್ತು ಅತ್ಯಂತ ಸೂಕ್ಷ್ಮ ಸಂವೇದನೆಯುಳ್ಳ ವ್ಯಕ್ತಿಯಾಗಿದ್ದಾರೆ ಎಂದ ಅವರು, ಅವರ ಪರಿಶ್ರಮದಿಂದಾಗಿ ರಾಜ್ಯಾದ್ಯಂತ ಸಾವಿರಾರು ಮಕ್ಕಳಿಗೆ ಯಶಸ್ವಿಯಾಗಿ ಟ್ಯಾಬ್ ವಿತರಿಸಲಾಗುತ್ತಿದೆ ಎಂದರು.
ಮೈಸೂರಿನ ಆರ್ ಬಿಐನ ನೋಟು ಮುದ್ರಣಾಲಯ ಘಟಕದ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್ ಮಾತನಾಡಿ ಮೈಸೂರು ವಿಶ್ವದಲ್ಲಿಯೇ ಅತಿ ಹೆಚ್ಚು ನೋಟು ಉತ್ಪಾದಿಸುವ ಕೇಂದ್ರ ವೆನಿಸಿಕೊಂಡಿದೆ. ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಬಯಸಿ ಸಿಎಸ್ ಆರ್ ನಿಧಿ ಅಡಿ ಈ ಯೋಜನೆ ರೂಪಿಸಿಕೊಂಡಿದ್ದೇವೆ ಎಂದರು.
ಇದಕ್ಕೆ ಸಂಸದ ಪ್ರತಾಪ್ ಸಿಂಹ ರವರ ಮನವಿ ಸಹ ಕಾರಣವಾಗಿದೆ ಎಂದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಖಾಸಗಿ ಶಾಲೆಯ ಮಕ್ಕಳು ಆನ್ ಲೈನ್ ಶಿಕ್ಷಣ ಪಡೆಯುತ್ತಿದ್ದರು, ಆದರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆಯ ಕಾರಣದಿಂದ ಸಾಧ್ಯವಾಗಿರಲಿಲ್ಲ, ಸರ್ಕಾರಿ ಶಾಲಾ ಮಕ್ಕಳ ಕೊರತೆಯನ್ನು ನೀಗಿಸಲು ನಾವು ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಶಾಲೆಯ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಲು ಯತ್ನಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರಿನ ರೋಟರಿ ಸಂಸ್ಥೆಯ ಎಚ್.ಆರ್.ಕೇಶವ, ಡಿ ಡಿ ಪಿ ಐ ಪಾಂಡುರಂಗ, ಪತ್ರಕರ್ತ ಕೆ.ಪಿ.ನಾಗರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ 7 ಸರ್ಕಾರಿ ಪ್ರೌಢಶಾಲೆಗಳ ಇನ್ನೂರೈವತ್ತಕ್ಕೂ ಹೆಚ್ಚು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಕೌಸಲ್ಯಲೋಕೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೆಗೌಡ, ಆರ್ ಬಿ ಐ ನ ನೋಟು ಮುದ್ರಣಾಲಯ ಘಟಕದ ವ್ಯವಸ್ಥಾಪಕರಾದ ಧರಣಿಕುಮಾರ್, ಅನಂತ ಹೆಗ್ಡೆ, ರೋಟರಿಯ ಜಿಲ್ಲಾ ಚೇರ್ಮನ್ ತಿಲಕ್, ಕಂಪಲಾಪುರ ಗ್ರಾಪಂ ಅಧ್ಯಕ್ಷೆ ರಾಣಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ಕುಮಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ನಾಗಶೆಟ್ಟಿ, ಮತ್ತಿತರರು ಹಾಜರಿದ್ದರು.