ಶಿಕ್ಷಣದಿಂದ ಮಕ್ಕಳಿಗೆ ಉತ್ತಮ ಭವಿಷ್ಯ : ಶಿವರಾಜ ಪಾಟೀಲ್

ರಾಯಚೂರು.ಸೆ.೨೭- ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಹೆಚ್ಚಿನ ಶ್ರಮ ವಹಿಸಬೇಕೆಂದು ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರು ಸೆ.೨೬ರ(ಮಂಗಳವಾರ) ನಗರದ ಖಾಸಗಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರು ತಮ್ಮ ಸ್ವಚ್ಛತಾ ಕೆಲಸವನ್ನು ತಮ್ಮ ಮಕ್ಕಳಿಗೆ ವಿಸ್ತರಿಸದೇ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಕ್ಕೇರಿಸಬೇಕು. ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ನೀಡುವುದಕ್ಕಾಗಿ ಪ್ರತಿಯೊಬ್ಬ ಪೌರಕಾರ್ಮಿಕರೂ ಶಪತ ಮಾಡಬೇಕು ಎಂದು ತಿಳಿಸಿದರು.
ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿರುವ ಪೌರಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಸರ್ಕಾರ ತಮ್ಮ ಜವಾಬ್ದಾರಿಯನ್ನು ಪೂರ್ಣವಾಗಿ ನಿಭಾಯಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ನಗರದ ಸ್ವಚ್ಛತೆ ಮಾಡುವ ಪೌರಕಾಮಿಕರಿಗೆ ವಸತಿ ಸೌಲಭ್ಯವನ್ನೂ ಕಲ್ಪಿಸಲಾಗುವುದು ಮತ್ತು ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಕುಟುಂಬಕ್ಕೆ ಆರೋಗ್ಯ ಸೌಲಭ್ಯಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಅವರು ಮಾತನಾಡಿ, ಪೌರಕಾರ್ಮಿಕರ ಬೇಡಿಕೆಗಳನ್ನು ಆಧ್ಯತೆಯ ಮೇರೆಗೆ ಪರಿಶೀಲಿಸಿ ಸೌಲಭ್ಯಗಳನ್ನು ನೀಡಲಾಗುವುದು ಕಡ್ಡಾಯವಾಗಿ ಮಾಸಿಕ ವೇತನವನ್ನು ಸರಿಯಾದ ರೀತಿಯಲ್ಲಿ ವಿಳಂಬ ಮಾಡದೇ ಪಾವತಿಸಲಾಗುವುದು. ಮತ್ತು ಜೇಷ್ಠತೆ ಪಟ್ಟಿ ತಯಾರಿಸಿ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಲಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಧನದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರಸಭೆ ಕಚೇರಿಯಿಂದ ಏಕ್.ಮಿನಾರ, ಸೂಪರ್ ಮಾರ್ಕೇಟ್, ತೀನ್ ಕಂದಿಲ್ ಸೇರಿದಂತೆ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಶಿರಾಜ, ನಾಗರಾಜ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ನಗರಸಭೆ ಅಧಿಕಾರಿಗಳಾದ ಕೃಷ್ಣಾ ಕಟ್ಟಿಮನಿ, ವ್ಯವಸ್ಥಾಪಕರಾದ ರಾಜು, ಶಕೀಲ್, ಪೌರಕಾರ್ಮಿಕರ ಸಂಘದ ಬೀಮಣ್ಣ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.