ಶಿಕ್ಷಣದಿಂದ ಕ್ರಾಂತಿ ಮಾಡಿದ ಮಹಾ ನಾಯಕ ಬಾಬಾಸಾಹೇಬ್ ಅಂಬೇಡ್ಕರ್

ರಾಯಚೂರು,ಏ.೧೬- ಇತಿಹಾಸ ಪುಟಗಳಲ್ಲಿ ರಾಜ ಮಹಾರಾಜರು ರಕ್ತದಿಂದ ಕ್ರಾಂತಿ ಮಾಡಿದರೆ, ಬಾಬಾಸಾಹೇಬ್ ಬಿ ಆರ್ ಅಂಬೇಡ್ಕರ್ ರವರು ಶಿಕ್ಷಣದಿಂದ ಕ್ರಾಂತಿ ಮಾಡಿದ ಮಹಾನಾಯಕ,ಇವರು ಶಿಕ್ಷಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಅದರಿಂದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿವರ್ತನೆ ತಂದ ಮಹಾನಾಯಕ ಎಂದು ಬೆಂಗಳೂರಿನ ಉದ್ಯಮಿ ಹಾಗೂ ಸಮಾಜಿಕ ಚಿಂತಕರಾದ ಹೆಣ್ಣೂರು ಲಕ್ಷ್ಮೀ ನಾರಾಯಣರವರು ಇಂದು ನಗರದ ಜನಸೇವಾ ಟ್ರಸ್ಟ್ ನ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ ೧೩೨ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಬಾಬಾ ಸಾಹೇಬ್ರು ತಮ್ಮ ಇಡೀ ಜೀವನವನ್ನೇ ಶಿಕ್ಷಣ ಮತ್ತು ಜ್ಞಾನ ಸಂಪಾದನೆಗೆ ಮಹತ್ವ ನೀಡಿ, ಜ್ಞಾನದ ಗಣಿಯಾದ ಮಹಾಚೇತನ.ಇವರ ಆಶಯದಂತೆ ಎಲ್ಲರೂ ಶಿಕ್ಷಣವನ್ನು ಪಡೆದು ಸಾಮಾಜಿಕ ಸಮಾನತೆ, ಸಾಮಾಜಿಕದ ನ್ಯಾಯದ ಕಡೆ ನಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಹೋರಾಟಗಾರರಾದ ಹಾಗೂ ಜನಬಲ ಟೈಮ್ಸ್ ಪತ್ರಿಕೆಯ ಸಂಪಾದಕರಾದ ಅಂಬಣ್ಣ ಅರೋಲಿಕರ್ ರವರು ಮಾತನಾಡುತ್ತಾ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಿಂದ ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ , ಸಮಾನತೆ ಹಾಗೂ ಸಹಬಾಳ್ವೆ ಚಿಂತನೆಯನ್ನು ನೀಡಿದ್ದಾರೆ. ಇವರ ಹೋರಾಟದ ಬದುಕು ನಮ್ಮೆಲ್ಲರಿಗೂ ಮಾದರಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜನಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಟಿ. ಚಂದ್ರಶೇಖರ್ ರವರು ಮಾತನಾಡಿ ಇಂದು ಬಾಬಾ ಸಾಹೇಬ್ರವರ ಜಯಂತಿಯನ್ನು ನಾವೆಲ್ಲರೂ ಸಡಗರ ಸಂಭ್ರಮದಿಂದ ಮಾಡುತ್ತಿದ್ದೇವೆ, ಆದರೆ ಬಾಬಾ ಸಾಹೇಬ್ರವರನ್ನು ಸಡಗರ ಸಂಭ್ರಮದಿಂದ ಮಾಡುವುದರ ಜೊತೆಗೆ ಅವರ ವೈಚಾರಿಕ ಚಿಂತನೇ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಜೆ ಎಲ್ ಈರಣ್ಣ ಹಾಗೂ ಬೆಂಗಳೂರಿನ ಆದಿ ಜಾಂಬವ ಜನಸಂಘದ ರಾಜ್ಯಾಧ್ಯಕ್ಷರಾದ ಮುನಿಕೃಷ್ಣಯ್ಯ, ಹೋರಾಟಗಾರರಾದ ನಾಗರಾಜ್ ಕೋಟಿಗಾನಹಳ್ಳಿ, ಯುವ ಹೋರಾಟಗಾರರಾದ ರವಿರಾಜ್ ಕೋಗಿಲೆ ಹಾಗೂ ಜೆ ಎಲ್ ಗೋಪಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜನಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಏ ರಾಮುಲು, ಜೆ ರಾಮಪ್ಪ, ಜೆ ತಿಮ್ಮಯ್ಯ , ಜೆ ಬೋಳ ಬಂಡಿ,ಜೆ ಟೀ ಮಂಜುನಾಥ್, ಜೆ ಎಸ್ ರಾಜೇಶ್, ಜೆ ಟಿ ಮನೋಜ್ ಕುಮಾರ್, ಜೆ ಎ ವೆಂಕಟೇಶ್, ಜೆ ಟಿ ಈರಣ್ಣ, ಟೀ ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.
ಮೊದಲಿಗೆ ನಿವೃತ್ತ ಖಜಾನಾಧಿಕಾರಿಗಳಾದ ಏ ರಾಮುಲು ರವರು ಪ್ರಾರ್ಥಿಸಿದರು ಜೆ ಎಲ್ ಗೋಪಿ ಸ್ವಾಗತಿಸಿದರು, ಜೆ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರೆ, ಜೆ ಟಿ ಮನೋಜ್ ಕುಮಾರ್ ವಂದಿಸಿದರು.