ನವದೆಹಲಿ,ಸೆ.೨೭-ಜಾಗತಿಕ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿದ್ದಾರೆ.
ಭಾರತವು ಇಂದು ವಿಶ್ವದ ನಾಯಕತ್ವ ಸ್ಥಾನ ವಹಿಸಿಕೊಳ್ಳುವತ್ತ ಸಾಗಿದ್ದು,ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳು ನಡೆಯಲು ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಡೆಹ್ರಾಡೂನ್ ಯುಪಿಇಎಸ್ ನ ಆನ್ ಲೈನ್ ವಿಭಾಗ ಯುಪಿಇಎಸ್ ಆನ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದಲ್ಲಿ ತಂತ್ರಜ್ಞಾನ ಹೆಚ್ಚಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಕಾರ ಸೌಲಭ್ಯ ನೀಡಲಿದೆ ಎಂದರು.
ಉನ್ನತ ಶಿಕ್ಷಣದ ಪ್ರಮಾಣಪತ್ರಗಳನ್ನು ನಕಲು ಮಾಡಿ ವಂಚನೆ ನಡೆಸುವುದನ್ನು ತಪ್ಪಿಸಲು ವಿದ್ಯಾರ್ಥಿಗಳ ಅಂಕಪಟ್ಟಿ ಇನ್ನಿತರ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಡಿಜಿ ಲಾಕರ್ ನಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ಆಧಾರ್ ಮತ್ತು ಡಿಜಿಲಾಕರ್ ಸೌಲಭ್ಯಗಳ ಯಶಸ್ಸು ಭವಿಷ್ಯವು ಡಿಜಿಟಲ್ ಎನ್ನುವುದನ್ನು ಸೂಚಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳ ಪ್ರಮಾಣ ಪತ್ರಗಳೂ ಈಗ ಡಿಜಿಲಾಕರ್ ನಲ್ಲಿದ್ದು ದೃಢೀಕರಣದ ಜೊತೆಗೆ ಸಾಂಪ್ರದಾಯಿಕ ಕಾಗದದ ವಹಿವಾಟು ನಿವಾರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಕೇಂದ್ರ ಸಚಿವ ಡಾ.ಧನ್ ಸಿಂಗ್ ರಾವತ್ ಅವರು ಯುಪಿಇಎಸ್ ಭಾರತದ ಉಜ್ವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ೧೭ಕ್ಕೂ ಹೆಚ್ಚು ವಿದೇಶಗಳ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡುತ್ತಿದೆ. ರಾಜ್ಯದಲ್ಲಿ ೨೩ ಖಾಸಗಿ ವಿಶ್ವವಿದ್ಯಾಲಯಗಳಿದ್ದು ಯುಪಿಇಎಸ್ ಉತ್ತರಾಖಂಡದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಶಿಕ್ಷಣವು ಎಲ್ಲರಿಗೂ ಲಭ್ಯವಾಗಬೇಕೆನ್ನುವ ಯುಪಿಇಎಸ್ ಆನ್ ಬದ್ಧತೆಯು ಭಾರತ ಸರ್ಕಾರದ ಸಬಲೀಕರಣದ ಶಿಕ್ಷಣದ ಧ್ಯೇಯಕ್ಕೆ ಪೂರಕವಾಗಿದೆ. ಈ ಪ್ರಾರಂಭದ ಭಾಗವಾಗಿ ಯುಪಿಇಎಸ್ ಆನ್ ೧೦೦ ಸ್ಕಾಲರ್ ಶಿಪ್ ಗಳನ್ನು ಪ್ರಕಟಿಸಿದ್ದು ಅದರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳು, ಕ್ರೀಡಾಪಟುಗಳು ಮತ್ತು ಯೂನಿವರ್ಸಿಟಿಯ ಅಲುಮ್ನಿ ಒಳಗೊಂಡಿದ್ದಾರೆ. ಈ ಉಪಕ್ರಮವು ವಿಸ್ತಾರ ಶ್ರೇಣಿಯ ಆನ್ಲೈನ್ ಪದವಿ ಮತ್ತು ಪ್ರಮಾಣೀಕರಣದ ಕಾರ್ಯಕ್ರಮಗಳೊಂದಿಗೆ ಹಲವು ವಲಯಗಳು ಮತ್ತು ಕೈಗಾರಿಕೆಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಸಬಲೀಕರಿಸುವ ಅವರನ್ನು ನಾಳಿನ ವಿಶ್ವವನ್ನು ಮುನ್ನಡೆಸುವ ನಾಯಕರಾಗಿ ರೂಪಿಸಲಿದೆ ಎಂದು ಹೇಳಿದರು.