ಶಿಕ್ಷಣತಜ್ಞೆ, ಸಮಾಜ ಸುಧಾರಕಿ ಫಾತಿಮಾ ಶೇಖ್

ಕಲಬುರಗಿ,ಜ.9: ಫಾತಿಮಾ ಶೇಖ್ ಅವರು ಮಹಾತ್ಯ ಜ್ಯೋತಿಬಾಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೊತೆಗೂಡಿ ದೀನ,ದಲಿತ, ಶೋಷಿತ ವರ್ಗದ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜದಲ್ಲಿದ್ದ ಮೂಡನಂಬಿಕೆ, ಕಂದಾಚಾರ ವಿರುದ್ಧ ಜಾಗೃತಿಯನ್ನು ಮೂಡಿಸಿದ್ದಾರೆ. ಅವರನ್ನು ‘ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಎಂದು ಪರಿಗಣಿಸಲಾಗಿದ್ದು, ಅವರ ಕೊಡುಗೆ ಪರಿಚಯಿಸುವ ಕಾರ್ಯ ಜರುಗಬೇಕಾಗಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಮಹಾದೇನ ನಗರದ ಶಿವಾ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಫಾತಿಮಾ ಶೇಖ್ ಅವರ 192ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡಿದರು.
ಫಾತಿಮಾ ಶೇಖ್ ಅವರು ಜಾತ್ಯಾತೀತವಾದಿಯಾಗಿದ್ದು, ಎಲ್ಲಾ ವರ್ಗದ ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದು ಗಮನಾರ್ಹವಾಗಿದೆ. ಎಲ್ಲಾ ಹೆಣ್ಣು ಮಕ್ಕಳ್ಳನ್ನು ವಿದ್ಯಾವಂತೆಯರನ್ನಾಗಿ ಮಾಡಲು ಪಟ ತೊಟ್ಟಿದ್ದ ಸಾವಿತ್ರಿಬಾಯಿ ಫುಲೆ ಅವರ ಜೊತೆಗೂಡಿ ನಿರಂತರವಾಗಿ ಶ್ರಮಿಸಿದ್ದಾರೆ. ಶಿಕ್ಷಣದ ಮಹತ್ವವನ್ನು ಮನೆ-ಮನೆಗೆ ತೆರಳಿ ವ್ಯಾಪಕವಾದ ಪ್ರಚಾರ ಮಾಡಿದರು. ಸಮಾಜ ಸುಧಾರಣೆಗಾಗಿ ಸದಾ ಹಂಬಲಿಸುವ ಮನ ಅವರದಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮತ್ತಿತರರಿದ್ದರು.