
ಲಕ್ಷ್ಮೇಶ್ವರ,ಏ10 : ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ಗುಳೆ ಹೋಗುತ್ತಿದ್ದ ಬಡ ಜನರಿಗೆ ಸ್ಥಳೀಯವಾಗಿ ಕೆಲಸ ನೀಡಿ ಆಸರೆಯಾಗಿರುವ ನರೇಗಾ ಯೋಜನೆ ಇದೀಗ ಸೂರಣಗಿ ಗ್ರಾಮದ ಆಫ್ರೀನಾಭಾನು ತಬ್ಬಲ್ ಎಂಬ ಯುವತಿಯ ನರ್ಸಿಂಗ್ ಶಿಕ್ಷಣಕ್ಕೂ ಹಣ ಹೊಂದಿಸುವಲ್ಲಿ ಸಹಕಾರಿಯಾಗಿದೆ.
ಗ್ರಾಮದ ದಾವಲಸಾಬ್ ಮತ್ತು ಹೀನಾಕೌಸರ ದಂಪತಿ ಪುತ್ರಿ. ಆಫ್ರೀನಾಭಾನು. ಇವರ ತಂದೆ ತಾಯಿಗೆ ಒಟ್ಟು ನಾಲ್ವರು ಮಕ್ಕಳು. ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ. ಮಗ 9ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ಕಟ್ಟಡ ನಿರ್ಮಾಣದ ಬುನಾದಿ ತೆಗೆಯುವ ಕೆಲಸ. ಮಾಡುತ್ತಿದ್ದಾರೆ. ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಮೊದಲ ಪುತ್ರಿ ಬಿಎವರೆಗೆ ವ್ಯಾಸಂಗ ಮಾಡಿದ್ದಾರೆ. ಆಫ್ರೀನಾಭಾನು ಸಧ್ಯ ಗದಗ ನಗರದ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ಶಿಕ್ಷಣ ಖರ್ಚು ವೆಚ್ಚಕ್ಕೆ ನರೇಗಾ ಯೋಜನೆ ವರದಾನವಾಗಿದೆ.
ಆಫ್ರೀನಾಭಾನು ಅವರಿಗೆ ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣದ ಖರ್ಚು ವೆಚ್ಚಕ್ಕೆ ಹಣವನ್ನು ತಾವೇ ಹೊಂದಿಸಿಕೊಳ್ಳಬೇಕೆಂಬ ಇಚ್ಚೆ ಅವರದು. ಆದರೆ ಇದನ್ನು ಮನೆಯಲ್ಲಿ ಹೇಳಲು ಹಿಂಜರಿಕೆ. ಇಂಥ ಸಂದರ್ಭದಲ್ಲಿ ಅವರ ನೆರವಿಗೆ ಬಂದದ್ದು ಉದ್ಯೋಗ ಖಾತ್ರಿ. ಶೈಕ್ಷಣಿಕ ಖರ್ಚುನ್ನು ನೀಗಿಸಿಕೊಳ್ಳುವ ಸಲುವಾಗಿ ಆಫ್ರೀನಾಭಾನು ಪ್ರತಿದಿನ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ.
ನರ್ಸಿಂಗ್ ಶಿಕ್ಷಣಕ್ಕೆ ನರೇಗಾ ಹಣ ಬಳಕೆ: ಬಡ ಕುಟುಂಬದ ಆಫ್ರೀನಾಭಾನು ಅವರಿಗೆ ಶಿಕ್ಷಣಕ್ಕೆ ಅಗತ್ಯವಾದ ಹಣ ಹೊಂದಿಸಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯ ಅತ್ಯಂತ ಉಪಯುಕ್ತವಾಗಿದೆ. ತಾಯಿ, ಅಕ್ಕ ಮೂವರು ಸೇರಿ ಶಿಕ್ಷಣಕ್ಕೆ ಹಣ ಜೋಡಿಸಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ 20,000 ರೂಪಾಯಿಗಳನ್ನು ದುಡಿಯಬೇಕೆಂದು ನಿರ್ಧರಿಸಿದ್ದಾರೆ. ಇವರ ಮನೋಬಲವನ್ನು ಕಂಡ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕರು (ಗ್ರಾಉ) ಕೃಷ್ಣಪ್ಪ ಧರ್ಮರ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕಡೂರ ಅವರು ನಿರಂತರ ಕೆಲಸ ಒದಗಿಸುವ ಉದ್ದೇಶದಿಂದ ಜಲ ಸಂಜೀವಿನಿ ಕಾರ್ಯಕ್ರಮದಡಿ ಬದು ನಿರ್ಮಾಣ ಕೆಲಸಕ್ಕಾಗಿ ಯೋಜನೆ ರೂಪಿಸಿದ್ದಾರೆ.