ಶಿಕ್ಷಕ-ಶಿಕ್ಷಕೇತರ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹುಬ್ಬಳ್ಳಿ,ಮಾ7: ರಾಜ್ಯದ ಎಲ್ಲ ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳ, ಶಾಲಾ ಕಾಲೇಜುಗಳಲ್ಲಿನ ಶಿಕ್ಷಕ – ಶಿಕ್ಷಕೇತರ ನೌಕರರ ಕಾಲ್ಪನಿಕ ವೇತನ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಜೆಡಿಎಸ್ ಶಿಕ್ಷಕರ ಹಾಗೂ ಉಪಾಧ್ಯಾಯರ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ದಿನಗಳಿಂದಲ್ಲೂ ಶಿಕ್ಷಕ ಹಾಗೂ ಶಿಕ್ಷಕೇತರ ನೌಕರರ ಬೇಡಿಕೆಗಳು ಪರಿಹಾರ ಕಾಣದೆ ಸಮಸ್ಯೆಗಳಾಗಿಯೇ ಉಳಿದಿವೆ.
ಈ ನಿಟ್ಟಿನಲ್ಲಿ ಬೇಡಿಕೆಗಳಾದ ಕಾಲ್ಪನಿಕ ವೇತನ, ಪಿಂಚಣಿ, ಕನಿಷ್ಠ ವೇತನ ಮತ್ತು ಸೇವಾ ಭದ್ರತೆ, ಹೆಚ್ಚುವರಿ ಶಿಕ್ಷಕರ ಸಮಸ್ಯೆ, ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೊಪಡಿಸುವುದು, ಹುದ್ದೆಗಳ ಭರ್ತಿ, ಜ್ಯೋತಿ ಸಂಜೀವಿನಿ ಸೇರಿದಂತೆ ರಾಜ್ಯವು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಮಸ್ಯಾರಹಿತ ಹಾಗೂ ಭ್ರಷ್ಟಾಚಾರ ರಹಿತ ಶಿಕ್ಷಣ ಇಲಾಖೆಯನ್ನಾಗಿಸಬೇಕು ಎಂಬುದು ಸೇರಿದಂತೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಫ್. ಎ. ಶೇಖ್, ನಗರ ಜಿಲ್ಲಾ ಕಾರ್ಯಾಧ್ಯಕ್ಷ ಗಜಾನನ ಅಣ್ವೇಕರ, ಈರಪ್ಪ ಎಮ್ಮಿ ಉಪಸ್ಥಿತರಿದ್ದರು.