ಶಿಕ್ಷಕ ವೃತ್ತಿ ಅಂತ್ಯಂತ ಶ್ರೇಷ್ಠವಾದದು:ಪೂಜಾರಿ

ಸೈದಾಪುರ:ಜು.13:ಶಿಕ್ಷಕ ವೃತ್ತಿ ಅಂತ್ಯಂತ ಶ್ರೇಷ್ಠವಾದದು. ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ಜೀನವದ ಮಹತ್ವದ ಭಾಗವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.
ಸಮೀಪದ ಲಿಂಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶಿಕ್ಷಕಿ ನೀಲವ್ವ ಹಾಗೂ ಮುಖ್ಯ ಗುರುಗಳಾಗಿ ಬಡ್ತಿ ಪಡೆದು ಬೇರೆ ಶಾಲೆಗೆ ವರ್ಗಾವಣೆಗೊಂಡ ಸಾಬರೆಡ್ಡಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿಯು ನಿಂತ ನೀರಲ್ಲ. ಹೊಸ ಹೊಸ ಬದಲಾವಣೆಗಳೊಂದಿಗೆ ವ್ಯಕ್ತಿಯ ಬದುಕಿನ ದಿಕ್ಕನ್ನು ಬದಲಾಯಿಸಬಲ್ಲ ಬಹು ದೊಡ್ಡ ಅಸ್ತ್ರ. ಆದ್ದರಿಂದ ಶಿಕ್ಷಕರು ಅದನ್ನು ತರಗತಿಯಲ್ಲಿ ಉತ್ತಮವಾಗಿ ಬಳಸಿಕೊಂಡರೆ ಸಮಾಜ ಮತ್ತು ದೇಶದ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ನಿವೃತ್ತಿ ಜೀವನವು ಕೂಡ ಸಮಾಜದ ಡೊಂಕನ್ನು ತಿದ್ದುವ ಕಾರ್ಯ ನಿರಂತರವಾಗಿರಲಿ. ಮುಖ್ಯ ಗುರುವಾಗಿ ಬಡ್ತಿ ಹೊಂದಿದ ಶಿಕ್ಷಕರು ನಿಮ್ಮ ಜವಬ್ದಾರಿಯನ್ನು ಅರಿತು ಉತ್ತಮವಾಗಿ ಸೇವೆಯನ್ನು ನೀಡಿ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಮನಗನಾಳ, ಎಸ್‍ಡಿಎಂಸಿ ಅಧ್ಯಕ್ಷ ಮಡಿವಾಳಪ್ಪ, ಗ್ರಾಮ ಪಂಚಾಯಿತಿ ಸದಸ್ಯ ರಾಚಪ್ಪಗೌಡ, ಬಸವರಾಜಪ್ಪಗೌಡ ಶಿರಡಿ, ಪ್ರಭಾರಿ ಮುಖ್ಯಶಿಕ್ಷಕಿ ಜ್ಯೋತಿ ಜಿಎನ್, ಲಲಿತಾ ಪರಮೇಶ್ವರಿ, ಸಂಧ್ಯಾಗೌಡ, ಅತಿಥಿ ಶಿಕ್ಷಕರಾದ ಶಿವಕುಮಾರ, ತಾಯಪ್ಪ, ಸುನೀತಾ ಹಾಗೂ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.