ಶಿಕ್ಷಕ ಮಿತ್ರ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಲು ಡಾ.ಹೊಸಮನಿ ಕರೆ

ವಿಜಯಪುರ:ಜು.24: ಪ್ರಥಮ ಮತ್ತು ದ್ವೀತಿಯ ಪಿಯುಸಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಹೊಂದಿಲ್ಲದ ವಿಷಯಗಳಲ್ಲಿ 20 ಆಂತರಿಕ ಅಂಕಗಳ ಪರೀಕ್ಷೆ ಹಾಗೂ ಇಎಲ್‍ಸಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಶಿಕ್ಷಕ ಮಿತ್ರ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಕೆ.ಹೊಸಮನಿ ಕರೆ ನೀಡಿದರು.

ನಗರದ ಬಾಗಲಕೊಟೆ ರಸ್ತೆಯ ಪಿಡಿಜೆ ಪದವಿಪೂರ್ವ ಕಾಲೇಜ್‍ನಲ್ಲಿ ಶನಿವಾರ ಜರುಗಿದ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ವಿವಿಧ ವೃತ್ತಿ ಸಂಬಂಧ ಸೇವೆಗಳನ್ನು ಆನ್‍ಲೈನ್ ಮೂಲಕ ಪಡೆಯಲು ಶಿಕ್ಷಕ ಮಿತ್ರ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

ಪ್ರಾಯೋಗಿಕ ಪರೀಕ್ಷೆ ಹೊಂದಿಲ್ಲದಎಲ್ಲಾ ವಿಷಯಗಳ ಉಪನ್ಯಾಸಕರುಗಳು ಚರ್ಚಿಸಿ ಅಸೈನ್‍ಮೆಂಟ್ ಮತ್ತು ಪ್ರಾಜೆಕ್ಟ್‍ಗಳ ಗರಿಷ್ಠ ಸಂಖ್ಯೆಯ ಶೀರ್ಷಿಕೆಗಳನ್ನು ಸಿದ್ಧಪಡಿಸಿ ಉಪನಿರ್ದೇಶಕರಿಂದ ಅನುಮೋದನೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಶಿಕ್ಷಣ ಶಾಸ್ತ್ರ ಉಪನ್ಯಾಸಕ ಜಗದೀಶ ಗುಲಗಂಜಿ ಆಂತರಿಕ ಅಂಕಗಳನ್ನು ಎಸ್.ಎ.ಟಿ.ಎಸ್‍ನಲ್ಲಿ ಅಳವಡಿಸುವ ಮತ್ತು ಶಿಕ್ಷಕ ಮಿತ್ರ ತಂತ್ರಾಂಶ ಬಳಕೆಯ ಕುರಿತು ಮಾಹಿತಿಯನ್ನು ನೀಡಿದರು. ಕನ್ನಡ ವಿಷಯದ ಬಗ್ಗೆ ಮಹಾದೇವ ರೆಬಿನಾಳ, ವಾಣಿಜ್ಯ ಶಾಸ್ತ್ರ ವಿಷಯದ ಬಗ್ಗೆ ಎಲ್.ಜಿ.ಕುಂಬಾರ, ರಾಜ್ಯಶಾಸ್ತ್ರ ವಿಷಯದ ಬಗ್ಗೆ ಎಂ.ಬಿ.ರಜಪೂತ, ಸಮಾಜಶಾಸ್ತ್ರ ವಿಷಯದ ಬಗ್ಗೆ ಎಂ.ಡಿ. ಹೆಬ್ಬಿ, ಇಂಗ್ಲೀಷ ವಿಷಯದ ಬಗ್ಗೆ ಸಿ.ಎಸ್. ಪೂಜಾರಿ, ಉರ್ದು ವಿಷಯದ ಬಗ್ಗೆ ಎನ್.ಎಸ್. ಭೂಸನೂರ, ಗಣಿತಶಾಸ್ತ್ರ ವಿಷಯದ ಬಗ್ಗೆ ಎಸ್.ಆರ್. ಬೆನಕಟ್ಟಿ ಮಾಹಿತಿ ನೀಡಿದರು.

ಸಭೆಯಲ್ಲಿ ವಿಜಯಪುರ, ಬಬಲೇಶ್ವರ ಮತ್ತು ತಿಕೋಟಾ ತಾಲೂಕಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿ ಸುನಿಧಿ ಕಡಿವಾಳ ಮತ್ತು ಸಂಗಡಿಗರು ಪ್ರಾರ್ಥಿಸಿದರು ಕಾಲೇಜಿನ ಪ್ರಾಚಾರ್ಯ ದೇವಿಕಾ ಕುಲಕರ್ಣಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಕಚೇರಿಯ ಶಾಖಾಧಿಕಾರಿಗಳು ಹಾಗೂ ಬಿ. ಟಿ. ಗೊಂಗಡಿ ಮಾತನಾಡಿದರು. ಎಸ್.ವ್ಹಿ. ಕುಲಕರ್ಣಿ ನಿರೂಪಿಸಿದರು. ಪ್ರಾಚಾರ್ಯ ಕೆ.ಎ.ಉಪ್ಪಾರ ವಂದಿಸಿದರು.