ಶಿಕ್ಷಕ ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟ ಸಹಕಾರಿ- ಕ್ಷೇತ್ರಶಿಕ್ಷಣಾಧಿಕಾರಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ2: ಮಕ್ಕಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಶಿಕ್ಷಕರಿಗೆ ತಮ್ಮ ಪ್ರತಿಭೆಯನ್ನು ಅನಾವರ್ಣಗೊಳಿಸಲು ಕ್ರೀಡಾಕೂಟಗಳು ಸಹಕಾರಿ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಚೆನ್ನಬಸಪ್ಪ ಹೇಳಿದರು.
ಹೊಸಪೇಟೆಯ ಚಿತ್ತವಾಡಿಗಿ ಪಿ.ಬಿ.ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಎರಡು ದಿನಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳನ್ನು ತಯಾರಿಗೊಳಿಸುವ ಶಿಕ್ಷಕರು ಕ್ರೀಡಾಕೂಟ ಹಾಗೂ ಸಾಂಸ್ಕೃತಿ ಸ್ಪರ್ಧೆಗಳಿಂದ ತಮ್ಮ ಪ್ರತಿಭಾ ಪ್ರದರ್ಶನ ತೋರಿಸಲು ಸಾಧ್ಯ ಈ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಶಿಕ್ಷಕ ದಿನಾಚರಣೆಯ ಪೂರ್ವದಲ್ಲಿ ವೈವಿಧ್ಯಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡ ಎರಡು ದಿನಗಳ ಕ್ರೀಡಾ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಶ್ಲಾಘನೀಯ ಎಂದು ಕಾರ್ಯಕ್ರಮದ ಅತಿಥಿ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಸಂಘದ ಕಾರ್ಯವನ್ನು ಪ್ರಸಂಶಿಸಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷದಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಾಲಿಬಾಲ್, ತ್ರೋಬಾಲ್, ರಂಗೋಲಿ, ಚೆಸ್, ಕೇರಂ, ಗುಂಡು ಎಸೆತ, ಭಾವಗೀತೆ, ಜಾನಪದಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಶಿಕ್ಷಕರು ಈ ಎಲ್ಲಾ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಳ್ಗೊಂಡಿರುವುದಕ್ಕೆ ಹರ್ಷವ್ಯಕ್ತಪಡಿಸಿದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎ.ಎನ್.ಸುಧಾಕರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಕಾಂತ.ವಿ, ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಮಾರ್ಗದಪ್ಪ, ಪ್ರಕಾಶ ಕುಲಕರ್ಣಿ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕರು ಪಾಲ್ಗೊಂಡಿದ್ದರು.