ಶಿಕ್ಷಕ ಆರ್.ವಿ.ಪಾಟೀಲ್‍ರ ಮನೆಯ ಮುಂದಿರುವ ಚಿಕ್ಕ ಕೈ ತೋಟದಲ್ಲಿ ಕಂಗೊಳಿಸುತ್ತಿರುವ ಹಸಿರು ವನ

ಇಂಡಿ, ಜೂ.5-ಪಟ್ಟಣದ ಹಳೆಯ ಸಾಲೋಟಗಿ ರಸ್ತೆಯಲ್ಲಿರುವ ಸದಾಶಿವನಗರದಲ್ಲಿರುವ ಆರ್.ವಿ.ಪಾಟೀಲ್ ಶಿಕ್ಷಕರ ಮನೆಯ ಮುಂದಿರುವ ಚಿಕ್ಕ ಕೈ ತೋಟವು ಹಸಿರು ವನದಂತೆ ಕಂಗೊಳಿಸುತ್ತದೆ.
ಸುಮಾರು ಐದು ವರ್ಷಗಳಿಂದ ಮನೆಯ ಮುಂದೆ ಅಂಗಳದ ಚಿಕ್ಕ ಕೈ ತೋಟದಲ್ಲಿ ಹಲವಾರು ಹೂವಿನ ಮತ್ತು ಹಣ್ಣಿನ ಸಸ್ಯಗಳನ್ನು ಬೆಳೆಸಿ ಪೋಷಿಸಿದ್ದಾರೆ. ಗಿಡಗಳಲ್ಲಿ ಪಕ್ಷಿಗಳಿಗೆ ಬೇಸಿಗೆ ಸಮಯದಲ್ಲಿ ನೀರು ಕುಡಿಯಲು ವ್ಯವಸ್ಥೆ ಮಾಡಿದ್ದಾರೆ. ಇವರ ಕಾರ್ಯದಲ್ಲಿ ಇವರ ಪತ್ನಿ ಸಹಕಾರ ನೀಡಿದ್ದಾರೆ.
ಮನೆಯ ಮುಂದೆ ಹಾಗೂ ಪಕ್ಕದಲ್ಲಿ ಪ್ರತಿನಿತ್ಯ ಒಂದು ಗಂಟೆ ಸ್ವಚ್ಛವಾಗಿ ಕಸಗುಡಿಸಿ ನೀರನ್ನು ಸಿಂಪಡಿಸುತ್ತಾರೆ. ಮತ್ತೆ ಸಾಯಂಕಾಲ ಅಂಗಳದ ತುಂಬ ನೀರನ್ನು ಸಿಂಪಡಿಸುತ್ತಾರೆ. ಚರಂಡಿ ನೀರು ಹರಿದು ಹೋಗಲು ತಾವೇ ಸ್ವತಃ ಕೈಯಲ್ಲಿ ಸನಿಕೆ ಹಿಡಿದು ವ್ಯವಸ್ಥೆ ಮಾಡುತ್ತಾರೆ. ಕೈಯಲ್ಲಿ ಕೊಡಲಿ ಹಿಡಿದು ಕಂಟಿಗಳನ್ನು ಕಡಿಯುತ್ತಾರೆ. ಇವರ ಜೊತೆಗೆ ಪಕ್ಕದ ಮನೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆಯ್.ಜಿ.ಆಳೂರ ಹಾಗೂ ಪಂಚಯ್ಯ ಗಚ್ಚಿನಮಠ ಸಹಕರಿಸುತ್ತಾರೆ. ವಿದ್ಯುತ್ ಇಲಾಖೆಯಿಂದ ಸುತ್ತಲಿನ ಮನೆಯವರ ಸಹಕಾರದಿಂದ ಕಂಬಗಳನ್ನು ನಡೆಸಿ ಬೆಳಕಿನ ವ್ಯವಸ್ಥೆ ಮಾಡಿಸಿದ್ದಾರೆ. ಒಳಚರಂಡಿ ವ್ಯವಸ್ಥೆ ಮಾಡಿಸಲು ಹಾಗೂ ಮನೆ ಮುಂದೆ ರಸ್ತೆ ನಿರ್ಮಿಸಲು ಪುರಸಭೆಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಸುತ್ತಲಿನ ಮನೆಯವರ ಮುಂದೆ ಪುರಸಭೆ ವಾಹನವು ಬಂದು ಪ್ರತಿನಿತ್ಯ ಕಸ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಮನೆಯ ಮುಂದೆ ಕಸ ಬಿಳದಂತೆ ನೋಡಿಕೊಳ್ಳುತ್ತಾರೆ. ಇದು ಇವರ ಪರಿಸಿರಪ್ರೇಮ ಎತ್ತಿ ತೋರಿಸುತ್ತದೆ.
ಶಿಕ್ಷಕರ ಪ್ರತಿನಿತ್ಯದ ಸ್ವಚ್ಛತಾ ಕಾರ್ಯವನ್ನು ನೋಡಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿರುವರು ಹಲವಾರು ಸಲ ಇವರ ಕಾರ್ಯವನ್ನು ನೋಡಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.