ಲೊವಾ (ಅಮೆರಿಕಾ), ಜು.೭- ಕಡಿಮೆ ಮಟ್ಟದ ದರ್ಜೆಯನ್ನು ನೀಡಿದಕ್ಕಾಗಿ ಸ್ಪಾನಿಶ್ ಮೂಲದ ೬೬ರ ಹರೆಯದ ಶಿಕ್ಷಕಿಗೆ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿ, ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ ಘಟನೆ ಅಮೆರಿಕಾದ ಲೊವಾ ರಾಜ್ಯದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವಿದ್ಯಾರ್ಥಿಯ ಶಿಕ್ಷೆಯ ಪ್ರಮಾಣ ಆಗಸ್ಟ್‌ನಲ್ಲಿ ಹೊರಬೀಳಲಿದೆ.
ಸ್ಪೇನ್ ಮೂಲದ ಶಿಕ್ಷಕಿ ನೊಹೆಮಾ ಗ್ರಾಬರ್ (೬೬) ಹತ್ಯೆಗೀಡಾದ ಶಿಕ್ಷಕಿ. ವಿಲ್ಲರ್ಡ್ ಮಿಲ್ಲರ್ (೧೮) ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ. ನವೆಂಬರ್ ೨ರ ೨೦೨೧ರಲ್ಲಿ ಹತ್ಯೆ ಪ್ರಕರಣ ನಡೆದಿತ್ತು. ಅಲ್ಲದೆ ಅನೇಕ ಸುತ್ತಿನ ವಿಚಾರಣೆಯಲ್ಲಿ ಅಂತಿಮವಾಗಿ ಕಳೆದ ಏಪ್ರಿಲ್ ೨ರಂದು ವಿದ್ಯಾರ್ಥಿ ಅಪರಾಧಿ ಎಂದು ಘೋಷಿಸಲಾಗಿದ್ದರೂ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಇದೀಗ ಅಪರಾಧಿಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದ್ದು, ಜೀವಾವಧಿ ಸಜೆ ವಿಧಿಸಲಾಗಿದೆ. ಜೆರೆಮಿ ಗೊಡಾಲೆ (೧೮) ಎಂಬಾತನ ಜೊತೆಗೂಡಿ ಮಿಲ್ಲರ್ ಈ ಹತ್ಯೆ ಪ್ರಕರಣ ನಡೆಸಿದ್ದ. ಕೊಲೆಯ ಸಮಯದಲ್ಲಿ ಇಬ್ಬರೂ ೧೬ ವರ್ಷ ವಯಸ್ಸಿನವರಾಗಿದ್ದು, ಸದ್ಯ ವಯಸ್ಕರೆಂದು ಗುರುತಿಸಲಾಗಿದೆ. ಇನ್ನು ಗೊಡಾಲೆಯ ಶಿಕ್ಷೆಯ ಘೋಷಣೆ ದಿನಾಂಕವನ್ನು ಮುಂದಿನ ಆಗಸ್ಟ್‌ಗೆ ನಿಗದಿಪಡಿಸಲಾಗಿದೆ. ಮಿಲ್ಲರ್‌ಗೆ ಕನಿಷ್ಠ ೩೫ ವರ್ಷಗಳ ನಂತರ ಮಾತ್ರ ಪೆರೋಲ್‌ನ ಸಾಧ್ಯತೆ ಇದ್ದು, ಅಲ್ಲಿಯ ವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ಪ್ರಕರಣದ ಸಂತ್ರಸ್ತೆ ಗ್ರಾಬರ್ ಕುಟುಂಬಕ್ಕೆ ಕನಿಷ್ಠ ೧೫೦,೦೦೦ ಡಾಲರ್ ಮೊತ್ತ ಪಾವತಿಸಲು ಮಿಲ್ಲರ್‌ಗೆ ನ್ಯಾಯಾಧೀಶರಾದ ಶಾನ್ ಶವರ್ಸ್ ಆದೇಶಿಸಿದ್ದಾರೆ. ಪ್ರಕರಣದ ವೇಳೆ ಮಿಲ್ಲರ್ ಅಪ್ರಾಪ್ತನಾಗಿದ್ದು, ಹಾಗಾಗಿ ಪ್ರಕರಣದ ಎಲ್ಲಾ ಹಂತಗಳನ್ನು ಅರಿಯಲು ವಿಫಲನಾಗಿದ್ದ ಎಂಬ ವಾದವನ್ನು ನ್ಯಾಯಾಧೀಶರಾದ ಶವರ್ಸ್ ತಿರಸ್ಕರಿಸಿ, ಅಂತಿಮವಾಗಿ ತೀರ್ಪು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.